ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ಅನುಷ್ಠಾನವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ಯುವಕರು ಯುವನಿಧಿಗೆ ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ಕಾರಣಕ್ಕೂ ಭತ್ಯೆ ಪಡೆಯಲು ವಿಳಂಬವಾಗಬಾರದು. ಪ್ರತಿಯೊಬ್ಬ ಫಲಾನುಭವಿಗೂ ಸಕಾಲದಲ್ಲಿ ಸೌಲಭ್ಯ ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮೀಣ ಭಾಗದಲ್ಲಿ ಮಳೆಯಿಂದ ಉಂಟಾಗುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್.ಆರ್. ಪಾಟೀಲ ಹೇಳಿದರು.
ಮಕ್ಕಳ ಬಸ್ ಪಾಸ್‌ಗಳು ಯಾವುದೇ ರೀತಿಯಲ್ಲೂ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು. ಧಾರವಾಡ ಜಿಲ್ಲೆ ಹಾಗೂ ತಾಲೂಕು ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಉತ್ತಮ ಪರಿಸರ ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸುಧೀರ ಎಸ್. ಬೋಳಾರ, ರತ್ನಾ ತೇಗೂರಮಠ, ರೇಹಾನ್ ರಝಾ ಐನಾಪೂರಿ ಹಾಗೂ ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಲೇಶ್ವರ ಬಾವಕಾರ ಅವರು ಮಾತನಾಡಿದರು.
ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವರ್ಧಮಾನ ಹಿರೇಗೌಡರ, ಶಿವಾನಂದ ಭೂಮಣ್ಣನವರ, ನೆಹರು ಪಾಟೀಲ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಯುವನಿಧಿಗೆ 12,792 ಅರ್ಜಿ
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಇದುವರೆಗೆ 12,792 ಅರ್ಜಿಗಳು ಸ್ವೀಕೃತವಾಗಿದ್ದು, 11,553 ಫಲಾನುಭವಿಗಳಿಗೆ ಡಿಬಿಟಿ ಮೂಲಕ ₹34,51,19,500 ಸಹಾಯಧನ ಜಮೆಯಾಗಿದೆ.
ಶಕ್ತಿ ಯೋಜನೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ 42,46,65,439 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸರ್ಕಾರದಿಂದ ಸುಮಾರು ₹936.73 ಕೋಟಿ ಬಿಡುಗಡೆಯಾಗಿದೆ.
ಗೃಹ ಜ್ಯೋತಿ ಯೋಜನೆಯಡಿ 5,67,985 ಫಲಾನುಭವಿಗಳಿದ್ದು, ಸರ್ಕಾರದಿಂದ ಒಟ್ಟು ₹80371.92 ಲಕ್ಷ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 3,77,361 ಫಲಾನುಭವಿಗಳಿಗೆ ₹2,270,27,90,000 ಹಣ ಬಿಡುಗಡೆಯಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 27 ಫಲಾನುಭವಿಗಳು ಮೃತಪಟ್ಟಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಅನ್ನಭಾಗ್ಯ ಯೋಜನೆಯಡಿ 3,75,996 ಫಲಾನುಭವಿಗಳಿದ್ದು, ಒಟ್ಟು ₹3,62,516 ಲಕ್ಷ ಹಣ ಬಿಡುಗಡೆಯಾಗಿದೆ.



