HomeGadag Newsಲಕ್ಷ್ಮೇಶ್ವರ: ವೃದ್ಧನ ಮೇಲೆ ಹರಿದ ಟಿಪ್ಪರ್; ಕಾಲು ಜಜ್ಜಿದರೂ ಪ್ರಾಣಾಪಾಯದಿಂದ ಪಾರು!

ಲಕ್ಷ್ಮೇಶ್ವರ: ವೃದ್ಧನ ಮೇಲೆ ಹರಿದ ಟಿಪ್ಪರ್; ಕಾಲು ಜಜ್ಜಿದರೂ ಪ್ರಾಣಾಪಾಯದಿಂದ ಪಾರು!

For Dai;y Updates Join Our whatsapp Group

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಟಿಪ್ಪರ್ ಹರಿದಿದೆ.

ಟಿಪ್ಪರ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ ವೃದ್ಧನ ಕಾಲು ಗಂಭೀರವಾಗಿ ಜಜ್ಜಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ನಿವಾಸಿ ರಾಮಣ್ಣ ಮಲ್ಲಪ್ಪ ಹುರಕನವರ (58) ಅವರು ಶಿಗ್ಲಿ ಕ್ರಾಸ್ ದಾಟುತ್ತಿದ್ದ ವೇಳೆ ಟಿಪ್ಪರ್ ಹರಿದಿದೆ. ಅಪಘಾತದ ತೀವ್ರತೆಗೆ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು.

ಕೂಡಲೇ ಸ್ಥಳೀಯರು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಬಳಿಕ ಪೊಲೀಸರು ಟಿಪ್ಪರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಭಾರಿ ವಾಹನಗಳ ವೇಗಕ್ಕೆ ಬ್ರೇಕ್ ಯಾವಾಗ?

ಪಟ್ಟಣದಲ್ಲಿ ಮರಳು, ಮಣ್ಣು, ಜಲ್ಲಿ, ಎಂ-ಸ್ಯಾಂಡ್ ಸೇರಿದಂತೆ ವಿವಿಧ ಸರಕು ಸಾಗಿಸುವ ಲಾರಿ ಹಾಗೂ ಟಿಪ್ಪರ್‌ಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೇಗವಾಗಿ ಸಂಚರಿಸುವ ಭಾರಿ ವಾಹನಗಳಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಆತಂಕದಲ್ಲೇ ಸಂಚರಿಸುವಂತಾಗಿದೆ.

ಕೆಲವು ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಿಸುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಇನ್ನೂ ಕೆಲ ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್‌ಫೋನ್ ಹಾಗೂ ಇಯರ್‌ಫೋನ್ ಬಳಸುತ್ತಾರೆ ಎನ್ನಲಾಗುತ್ತಿದೆ.

ಅತಿವೇಗ, ಓವರ್‌ಲೋಡ್ ಹಾಗೂ ಅಜಾಗರೂಕ ಚಾಲನೆಯಿಂದ ಅಪಘಾತದ ಅಪಾಯ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ ಸೇರಿದಂತೆ ಸಾರ್ವಜನಿಕರು, ಪಟ್ಟಣದ ಪ್ರಮುಖ ರಸ್ತೆಗಳು, ಕ್ರಾಸ್‌ಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಭಾರಿ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸುವಂತೆ ಒತ್ತಾಯಿಸಿದ್ದಾರೆ.

ಜನನಿಬಿಡ ಪ್ರದೇಶಗಳಲ್ಲಿ ಭಾರಿ ವಾಹನಗಳ ಅತಿವೇಗದ ಸಂಚಾರಕ್ಕೆ ಕಡಿವಾಣ ಹಾಕಬೇಕು. ಓವರ್‌ಲೋಡ್, ಅಜಾಗರೂಕ ಚಾಲನೆ ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರ ಜೀವ ರಕ್ಷಿಸಬೇಕು ಎಂದು ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ ಆಗ್ರಹಿಸಿದ್ದಾರೆ.

ಪೊಲೀಸ್, ಕಂದಾಯ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img