ಬೆಂಗಳೂರು: ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುವ ಬದಲು ನಿಯೋಗದೊಂದಿಗೆ ಬಂದು ಚರ್ಚೆ ನಡೆಸಲಿ. ಯೋಜನೆಯಿಂದ ಅವರಿಗೆ ಆಗುವ ಅನುಕೂಲಗಳ ಬಗ್ಗೆ ವಿವರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕಂ ಟ್ಯಾಗೋರ್ ಸೇರಿದಂತೆ ಅಲ್ಲಿನ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು.
ತಮಿಳುನಾಡಿನವರು ನಿಯೋಗದೊಂದಿಗೆ ಬರಲಿ
“ಇದು ನಮ್ಮ ರಾಜ್ಯ, ನಮ್ಮ ಹಕ್ಕು ಎಂಬುದನ್ನು ತಮಿಳುನಾಡಿನವರು ಅರ್ಥಮಾಡಿಕೊಳ್ಳಬೇಕು. ಅವರು ಬೇಕಾದರೆ ನಿಯೋಗದೊಂದಿಗೆ ಬರಲಿ. ಅಣೆಕಟ್ಟು ನಿರ್ಮಾಣದ ಸ್ಥಳಕ್ಕೆ ಕರೆದುಕೊಂಡು ಹೋಗಿ ಯೋಜನೆಯ ಸಂಪೂರ್ಣ ಮಾಹಿತಿ ನೀಡಲು ಸಿದ್ಧನಿದ್ದೇನೆ. ಅಲ್ಲಿ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತದೆ, ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ವಿರೋಧಿಸುತ್ತದೆ. ಆದರೆ ಇದು ರಾಜಕೀಯ ವಿಚಾರವಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು” ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ 177 ಟಿಎಂಸಿ ನೀರು ಒದಗಿಸುವುದು ಕರ್ನಾಟಕದ ಕರ್ತವ್ಯವಾಗಿದೆ. ಅವರ ನೀರಿನ ಹಕ್ಕನ್ನು ಗೌರವಿಸುವುದರ ಜತೆಗೆ ಕರ್ನಾಟಕದ ಹಕ್ಕುಗಳನ್ನೂ ರಕ್ಷಿಸಬೇಕಿದೆ. ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಡಿಕೆಶಿ ತಿಳಿಸಿದರು.
ಕೇಂದ್ರ ಸರ್ಕಾರ ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಭೂಮಿ ಒದಗಿಸುವಂತೆ ಸೂಚಿಸಿದೆ. ಅದನ್ನು ಹೊರತುಪಡಿಸಿದರೆ, ಇದು ಕರ್ನಾಟಕದ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಯೋಜನೆಯಾಗಿದೆ ಎಂದು ಅವರು ವಿವರಿಸಿದರು.
ತಮಿಳುನಾಡಿನ ಹಿತವನ್ನೂ ಕಾಪಾಡುತ್ತೇವೆ
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕದ ಕುರಿತು ಮಾತನಾಡಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಕರ್ನಾಟಕದ ಮೇಲಿದೆ. ಅದೇ ರೀತಿ ರಾಜ್ಯದ ಹಕ್ಕುಗಳನ್ನೂ ಕಾಪಾಡಬೇಕಿದೆ ಎಂದರು.
“ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಬಗ್ಗೆ ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುತ್ತೇವೆ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.
ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳೂ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರದಿಂದ ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.
ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗಿನ ಮಾತುಕತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ರಾಜಕಾರಣದಲ್ಲಿ ಸ್ಪರ್ಧೆ ಇರಬಹುದು. ಆದರೆ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ನೀಡಬೇಕು ಎಂದು ಹೇಳಿದರು.
“ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ” ಎಂದರು.
ಮೇಕೆದಾಟು ಯೋಜನೆಯ ಜತೆಗೆ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನೂ ಕೇಂದ್ರದ ಮುಂದಿಟ್ಟಿರುವುದಾಗಿ ತಿಳಿಸಿದರು. ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಈ ಸಂಬಂಧ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ ಎಂದರು.
ಮುಂದಿನ ಹಂತಗಳಲ್ಲಿ ಮೆಟ್ರೋ ಸಂಪರ್ಕವನ್ನು 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿಯಿದ್ದು, ಬಾಕಿ ಉಳಿದಿರುವ ಪ್ರಸ್ತಾವನೆಗಳಿಗೆ ತ್ವರಿತ ಅನುಮೋದನೆ ನೀಡುವಂತೆ ಕೇಂದ್ರವನ್ನು ಕೋರಿರುವುದಾಗಿ ಹೇಳಿದರು.
ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಮನವರಿಕೆ
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಗೆ ಯೋಜನೆಯ ಅಗತ್ಯವನ್ನು ವಿವರಿಸಿರುವುದಾಗಿ ಡಿಕೆಶಿ ಹೇಳಿದರು.
“ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂಪಾಯಿ ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ. ಈ ವೆಚ್ಚವನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಂಡು ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ” ಎಂದು ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಈ ವಿಚಾರದಲ್ಲಿ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದು, ಅದಕ್ಕೆ ಪ್ರಧಾನಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ ಎಂದರು.
ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ
ಸುವರ್ಣಸೌಧದ ಅಧಿವೇಶನದಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ರೈತರ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಹೊರೆ ಹೆಚ್ಚಾಗಿದೆ ಎಂದು ತಿಳಿಸಿದರು.
“ರೈತರ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು 20 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಅದು 30 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಮಾಡುತ್ತಿರುವುದೂ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ” ಎಂದು ಹೇಳಿದರು.









