ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಚುರುಕುಗೊಳಿಸಿದೆ. ಎಸ್ಐಟಿ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಆರಂಭವಾಗಿದ್ದು, ಸೌಜನ್ಯಾಳನ್ನು ಕೊನೆಯದಾಗಿ ನೋಡಿದ್ದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸೌಜನ್ಯಾಳ ಮಾವ ವಿಠಲ ಗೌಡ ಸೇರಿದಂತೆ ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಐವರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಅಧಿಕಾರಿಗಳು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.
ಎಸ್ಐಟಿ ಕಚೇರಿಯಲ್ಲಿ ತನಿಖಾಧಿಕಾರಿ ಲೋಕೇಶ್ ಹಾಗೂ ಸಹ ತನಿಖಾಧಿಕಾರಿ ಮನೋಜ್ ನಾಯಕ್ ಅವರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಮರುತನಿಖೆಗೆ ಆದೇಶ ಹೊರಬಿದ್ದ ಬೆನ್ನಲ್ಲೇ ತನಿಖಾ ತಂಡ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಈ ಹಿಂದಿನ ತನಿಖಾ ಸಂಸ್ಥೆಗಳು ಸಂಗ್ರಹಿಸಿದ್ದ ದಾಖಲೆಗಳು ಮತ್ತು ಮಾಹಿತಿಯನ್ನೂ ಎಸ್ಐಟಿ ತಂಡ ಪಡೆದುಕೊಂಡಿದೆ. ಜೊತೆಗೆ, ಸೌಜನ್ಯಾ ಹತ್ಯೆಯಾದ ಸ್ಥಳ ಹಾಗೂ ಆಕೆಯ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಮಹಜರು ಪ್ರಕ್ರಿಯೆಯನ್ನೂ ನಡೆಸಲಾಗಿದೆ.
ಸದ್ಯ ಪ್ರಕರಣದ ಮರುತನಿಖೆ ಮಹತ್ವದ ಹಂತ ತಲುಪಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ಮತ್ತು ಹಿಂದಿನ ದಾಖಲೆಗಳ ಪರಿಶೀಲನೆಯ ಮೂಲಕ ಎಸ್ಐಟಿ ತನಿಖೆಯನ್ನು ಮುಂದುವರಿಸಿದೆ.










