HomeGadag Newsಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ: ಅನಿಲ ಮೆಣಸಿನಕಾಯಿ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ: ಅನಿಲ ಮೆಣಸಿನಕಾಯಿ ವಾಗ್ದಾಳಿ

ಪಂಚ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತ–ಯುವಕರನ್ನು ಕಡೆಗಣಿಸಿದ ಕಾಂಗ್ರೆಸ್ ಸರಕಾರ: ಅನಿಲ ಮೆಣಸಿನಕಾಯಿ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಆಡಳಿತದ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ, ಬಳಿಕ ರೈತರು ಮತ್ತು ಯುವಕರ ಹಿತವನ್ನು ಕಡೆಗಣಿಸಿದೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಜಿಲ್ಲೆಗಳಿಗೆ ಅನುದಾನ ಹಂಚಿಕೆ ವಿಚಾರವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಖಾಲಿ ಚೊಂಬು, ಚಿಪ್ಪು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಬಳಿಕ ರೈತರಿಗಾಗಿ ಸಮರ್ಪಕ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಹಲವು ತಿಂಗಳಿಂದ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ನಕಲಿ ಖಾತೆಗಳಿಗೆ ಹಣ ಸಂದಾಯವಾಗಿರುವುದು ಸಾಬೀತಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗಿರುವ ಬಗ್ಗೆ ಸಾರಿಗೆ ಸಚಿವರೇ ಹೇಳಿಕೆ ನೀಡಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ. ಕೆಪಿಎಸ್‌ಸಿಯನ್ನೂ ಮುಚ್ಚುವ ಯತ್ನ ನಡೆದಿದೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದರು.

₹35 ಸಾವಿರ ಕೋಟಿ ಅನುದಾನದ ಭರವಸೆ ಹುಸಿ ಆರೋಪ

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ₹35 ಸಾವಿರ ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿ ಬಳಿಕ ಜಿಲ್ಲೆಗಳಿಗೆ ಸಮರ್ಪಕ ಅನುದಾನ ಒದಗಿಸಿಲ್ಲ ಎಂದು ಆರೋಪಿಸಿದರು. ಅಂಗೈಯಲ್ಲಿ ಆಕಾಶ ತೋರಿಸಿ ಬಳಿಕ ಖಾಲಿ ಚೊಂಬು ನೀಡಲಾಗಿದೆ. ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ದೂರಿದರು.

ಪ್ರತಿಭಟನಾಕಾರರು ‘ಕಾಂಗ್ರೆಸ್ ನಂಬಿದರೆ ಚೊಂಬು ಗ್ಯಾರಂಟಿ’, ‘ಬೊಕ್ಕಸ ಖಾಲಿ’, ‘ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ’ ಎಂಬ ಘೋಷಣೆಗಳಿರುವ ನಾಮಫಲಕಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಆನಂದಗೌಡ ಪಾಟೀಲ, ಲಿಂಗರಾಜ ಪಾಟೀಲ, ಅರವಿಂದ ಹುಲ್ಲೂರ, ಎಂ.ಎಂ. ಹಿರೇಮಠ, ಶಿವರಾಜ ಹಿರೇಮನಿಪಾಟೀಲ, ವಿಜಯಕುಮಾರ ಗಡ್ಡಿ, ರವಿ ದಂಡಿನ, ಅನಿಲ ಅಬ್ಬಿಗೇರಿ, ಚಂದ್ರು ತಡಸದ, ರಾಘವೇಂದ್ರ ಯಳವತ್ತಿ, ವಸಂತ ಪಡಗದ, ಶಂಕರ ಕಾಕಿ, ಇರ್ಷಾದ್ ಮಾನ್ವಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ಮಾಂತೇಶ ಬಾತಾಖಾನಿ, ಅರವಿಂದ ಕೆಲೂರ, ದೇವೇಂದ್ರಪ್ಪ ಹೂಗಾರ, ಎಸ್.ಪಿ. ಚವಡಿ, ಅವಿನಾಶ ಹೊನಗುಡಿ, ಅಪ್ಪಣ್ಣ ಟೆಂಗಿನಕಾಯಿ, ಸಂಜೀವ ಖಟವಟೆ, ಮಂಜುನಾಥ, ವಿನೋದ ಸೇರಿದಂತೆ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಆಡಳಿತದ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ರೈತರಿಗೆ ಸಮರ್ಪಕ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಗೃಹಲಕ್ಷ್ಮಿ ಹಣ ಹಲವು ತಿಂಗಳಿಂದ ಜಮೆಯಾಗಿಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ. ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು.
— ಅನಿಲ್ ಮೆಣಸಿನಕಾಯಿ, ಬಿಜೆಪಿ ಮುಖಂಡ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img