೨ಎ ಮೀಸಲಾತಿ ಹೋರಾಟ ಸ್ವಾಗತಾರ್ಹ, ಸಿದ್ರಾಮಯ್ಯ ತಮ್ಮ ಅನುಭವವನ್ನು ಬಿಜೆಪಿ ಮೇಲೆ ಹಾಕ್ತಿದ್ದಾರೆ: ಸಚಿವ ಸಿ.ಸಿ.ಪಾಟೀಲ್ ತಿರುಗೇಟು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಯಾವ ಕಡೆ ಇದ್ದಾರೆ, ಉಳಿದವರು ಯಾವ ಕಡೆ ಅದಾರೆ ಎಂಬುವುದೇ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಜಿ.ಪರಮೇಶ್ವರ್ ಅಂತೂ ಇತ್ತೀಚೆಗೆ ಎಲ್ಲೂ ಕಾಣಿಸುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿಲ್ಲ. ಮೂರು ಮನೆ ಕೂಡಿಸಿ ಇನ್ನೂ ದೊಡ್ಡದು ಮಾಡಿಕೊಳ್ಳುತ್ತೇವೆ ಎಂದು
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮೇಲಿನಂತೆ ಮಾತನಾಡಿದರು.

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಮೀಸಲಾತಿಯಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲು
ಸರಕಾರಕ್ಕೆ ಸಮಯಾವಕಾಶ ಕೊಡಬೇಕು. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಮೀಸಲಾತಿಗೆ ಪೂರಕವಾಗಿರುವ ಕಾನೂನಾತ್ಮಕ ಹೆಜ್ಜೆ ಇಟ್ಟಿದ್ದಾರೆ. ೨ಎ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಬರೆದಿದ್ದಾರೆ. ಸ್ವಾಮೀಜಿಗಳು ಅವಸರ ಮಾಡುವ ಅವಶ್ಯಕತೆ ‌ಇಲ್ಲ. ಪೂಜ್ಯರು ಪರಿಸ್ಥಿತಿ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸಿಎಂ ಯಡಿಯೂರಪ್ಪ ಮಾತಿನಂತೆ ನಾನು ಮತ್ತು ಸಚಿವ ಮುರಗೇಶ ನಿರಾಣಿಯವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಸ್ವಾಮೀಜಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರು, ದ್ರಾಕ್ಷಾರಸ‌ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೇಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಬಿಜೆಪಿಯ ಹಿರಿಯ ಮುಖಂಡ ಕರಿಗೌಡ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಇದ್ದರು.


Spread the love

LEAVE A REPLY

Please enter your comment!
Please enter your name here