ವಿಜಯನಗರ:- ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಮಾತಿದೆ. ಈ ವೇಳೆ ಮೊದಲನೆಯದಾಗಿ ಜಾರಿಗೆ ತಂದ ಯೋಜನೆಯೇ ಶಕ್ತಿ ಯೋಜನೆ. ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಯೋಜನೆಯೇ ಇದಾಗಿದೆ. ಈ ಯೋಜನೆಗೆ ರಾಜ್ಯದಲ್ಲಿ ಮಹಿಳೆಯರಿಂದ ಉತ್ತಮ ಪ್ರಶಂಸೆ ಇದೆ. ಆದರೆ ಈ ಶಕ್ತಿ ಯೋಜನೆಯಿಂದ ಎಷ್ಟು ಅನುಕೂಲ ಆಯ್ತೋ ಅಷ್ಟೇ ಅನಾನುಕೂಲ ಆಗಿದ್ದಂತೂ ಸುಳ್ಳಲ್ಲ.
ಸರಿಯಾದ ಸಮಯಕ್ಕೆ ಬಸ್ ಇಲ್ಲದೇ, ಬರುವ ಒಂದೋ, ಎರಡೋ ಬಸ್ ನಲ್ಲಿ ತುಂಬಿ ತುಳುಕುವ ಜನಗಳ ಮಧ್ಯೆ ಪ್ರಯಾಣಿಸುವ ಪ್ರಯಾಣಿಕರ ಪಾಡು ದೇವರಿಗೆ ಪ್ರೀತಿ. ಅಲ್ಲದೇ ಬಸ್ ಗಳು ಕೆಟ್ಟು ನಿಂತು ರಸ್ತೆ ಮಧ್ಯೆ ನಿಂತ ಎಷ್ಟೋ ಉದಾಹರಣೆ ಕಂಡಿದ್ದೇವೆ.
ಇದೀಗ ಅದೇ ರೀತಿಯ ಪ್ರಸಂಗ ವಿಜಯನಗರದಲ್ಲಿ ಜರುಗಿದೆ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ದಾರಿ ಮಧ್ಯದಲ್ಲಿ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರು ಪರದಾಡಿದ್ದಾರೆ.
ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಸಂಸದ ತುಕಾರಾಂ ಅವರು, ಬಸ್ ಯಾಕೆ ಕೆಟ್ಟು ನಿಂತಿದೆ ಎಂದು ವಿಚಾರಿಸಿ, ಡಿಪೋಗೆ ಮಾತನಾಡಿ ಪರ್ಯಾಯ ಬಸ್ ಕಲ್ಪಿಸಿದ್ದಾರೆ.
ಸಂಸದರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.