ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಅತ್ಯಂತ ಗಂಭೀರ ಸಮಸ್ಯೆಯಾಗಿ ಜನರನ್ನು ಕಾಡುತ್ತಿದೆ. ತೂಕ ಹೆಚ್ಚಾಗಲು ಕಾರಣಗಳು ಏನೇ ಇದ್ದರೂ, ಬೊಜ್ಜು ಕರಗಿಸಿಕೊಳ್ಳುವುದು ಮಾತ್ರ ದೊಡ್ಡ ಸವಾಲಾಗಿದೆ. ತೂಕವನ್ನು ಕಳೆದುಕೊಳ್ಳಲು ಹಲವು ಮಾರ್ಗಗಳಿದ್ದರೂ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿದೆ.
ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದಕ್ಕಾಗಿ ರಾತ್ರಿ ಹೊತ್ತು 7 ರಿಂದ 8 ಗಂಟೆಗಳ ಕಾಲು ನಿದ್ರೆ ಮಾಡುವುದು ಒಳ್ಳೆಯದು. ಮುಂಜಾನೆ ಬೇಗ ಎದ್ದು ಆರೋಗ್ಯ ಮತ್ತು ಫಿಟ್ನೆಸ್ ಮೇಲೆ ಕೇಂದ್ರೀಕರಿಸಿ. ಅಲ್ಲದೇ ಬೆಳಗ್ಗೆ ಬೇಗ ಎದ್ದೇಳುವುದರಿಂದ ಮೂಡ್ ಫ್ರೆಶ್ ಆಗಿರುತ್ತದೆ. ಅಲ್ಲದೇ ತಡವಾಗಿ ಏಳುವುದು ಮತ್ತು ತಡವಾಗಿ ಮಲಗುವುದು ಒತ್ತಡವನ್ನು ಹೆಚ್ಚಿಸುತ್ತದೆ. ಇದು ಚಯಾಪಚಯವನ್ನು ನಿಧಾನಗೊಳಿಸುತ್ತದೆ ಮತ್ತು ತೂಕ ಇಳಿಕೆಗೂ ಸಮಸ್ಯೆಯನ್ನು ಉಂಟು ಮಾಡುತ್ತದೆ. ಜೊತೆಗೆ ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಕರಗಿಸುವಲ್ಲಿ ಹೆಚ್ಚು ಸಹಕಾರಿ ಆಗಿದೆ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ: ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ, ಅದರಲ್ಲೂ ನೀವು ಜೀರಿಗೆಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಸಹ ಕುಡಿಯಬಹುದು. ಇದು ನಿಮಗೆ ತೂಕ ಇಳಿಸಿಕೊಳ್ಳಲು ಸಾಕಷ್ಟು ಸಹಕಾರಿ ಆಗಿದೆ ಮತ್ತು ದೇಹದಿಂದ ವಿಷವನ್ನು ಸಹ ತೆಗೆದುಹಾಕುತ್ತದೆ.
ಪ್ರತಿದಿನ ವಾಕಿಂಗ್: ತೂಕ ಇಳಿಸಿಕೊಳ್ಳಲು ಯಾವುದಾದರೂ ವ್ಯಾಯಾಮ ಅಥವಾ ಯೋಗವನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಪ್ರತಿದಿನ ವಾಕಿಂಗ್ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಪ್ರತಿದಿನ ಬೆಳಗ್ಗೆ ಅರ್ಧ ಗಂಟೆಯವರೆಗೆ ಸಾಧ್ಯವಾದಷ್ಟು ವಾಕಿಂಗ್ ಮಾಡಲು ಪ್ರಯತ್ನಿಸಿ.
ಪ್ರೋಟೀನ್ ಭರಿತ ಆಹಾರಗಳು: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಅನಾರೋಗ್ಯಕರ ಕ್ಯಾಲೋರಿ ಭರಿತ ಆಹಾರ ಸೇವನೆ ಕಡಿಮೆ ಮಾಡಿ. ಇದರ ಬದಲಿಗೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಭರಿತ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಮುಖ್ಯವಾದ ವಿಚಾರವೆಂದರೆ ಬೆಳಗ್ಗೆ ಆರೋಗ್ಯಕರ ಉಪಹಾರವನ್ನು ಸೇವಿಸುವುದು ಮತ್ತು ರಾತ್ರಿ ಹೊತ್ತು ಸೂಪ್ ಇತ್ಯಾದಿಗಳಂತಹ ಲಘು ಆಹಾರವನ್ನು ಸೇವಿಸುವುದು.
ಬೆಳಗಿನ ಉಪಾಹಾರಕ್ಕೆ ಮೊಟ್ಟೆಯ ಬಿಳಿಭಾಗ, ಮೂಸಂಬಿ ಮತ್ತು ಹೆಸರುಬೇಳೆ ಮೊಳಕೆ, ಚಿಯಾ ಬೀಜಗಳು, ಗಂಜಿ, ಓಟ್ಸ್ ಇತ್ಯಾದಿಗಳನ್ನು ಸೇವಿಸಿ. ಇದಲ್ಲದೇ, ನಿಮ್ಮ ದೈನಂದಿನ ಆಹಾರದಲ್ಲಿ ಸೋಯಾಬೀನ್, ಸಲಾಡ್ ಮತ್ತು ಹಸಿರು ತರಕಾರಿಗಳಂತಹ ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಿ. ತಿಂಡಿಗಳಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇವಿಸಿ.