ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಶಾಕ್ ಕೊಟ್ಟ ಲೋಕಾಯುಕ್ತ: ಗದಗ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾಳಿ, ಪರಿಶೀಲನೆ!

0
Spread the love

ಬೆಂಗಳೂರು/ ಗದಗ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ.

Advertisement

ಬೆಂಗಳೂರು, ಬೆಳಗಾವಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಬೀದರ್, ರಾಯಚೂರಿನಲ್ಲಿ ದಾಳಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೆಲೆ ದಾಳಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸದ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೆ, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ ಮನೆ, ಬೆಳಗಾವಿ ಜಿಲ್ಲೆಯ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್, ತುಮಕೂರಿನ ನಿವೃತ್ತ ಆರ್ಟಿಒ ಅಧಿಕಾರಿ ಎಸ್.ರಾಜು ಮನೆ ಮೇಲೆಯೂ ದಾಳಿ ನಡೆದಿದೆ.

ಗದಗ ಜಿಲ್ಲೆಯ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಗದಗ-ಬೆಟಗೇರಿ ನಗರಸಭೆ ಇಂಜಿನಿಯರ್ ಕಚೇರಿ, ಮನೆಗಳ ಮೇಲೆ, ದಾಳಿ ನಡೆದಿದ್ದು, ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಮನೆ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಐದು ಕಡೆ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೆ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಮನೆ ಮೇಲೆಯೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ಹನುಮಂತರಾಯಪ್ಪ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಮನೆ ಮೇಲೆಯೂ ದಾಳಿ ನಡೆದಿದೆ.

ಬೆಳಗಾವಿ ನಗರದ ಲಕ್ಷ್ಮೀಟೆಕ್ನಲ್ಲಿರುವ ಪ್ರಕಾಶ್ ನಿವಾಸ, ತಹಶೀಲ್ದಾರ್ ಕಚೇರಿ, ನಿಪ್ಪಾಣಿಯ ನಿವಾಸ ಸೇರಿ 6 ಕಡೆ ದಾಳಿ ನಡೆದಿದೆ.

ಸಾರಿಗೆ, ಬೆಸ್ಕಾಂ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಬೆನ್ನಲ್ಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಭ್ರಷ್ಟರ ಮನೆ ಬಾಗಿಲು ತಟ್ಟಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here