ವಿಜಯಸಾಕ್ಷಿ ಸುದ್ದಿ, ಗದಗ: ನೂತನವಾಗಿ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಸಿ.ಎನ್. ಶ್ರೀಧರ್ ಅವರನ್ನು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಇವರ ನಿಯೋಗದೊಂದಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸುವ ಮೂಲಕ ಎಂ.ಎಸ್.ಎಂ.ಇ. ವ್ಯಾಪ್ತಿಗೆ ಒಳಪಡುವ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ನಗರ ಸಭೆಯಿಂದ ಡಿ.ಓ.ಟಿ. ಲೈಸೆನ್ಸ್ ರಿಯಾಯಿತಿ ಇರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಉದ್ದಿಮೆ ಪರವಾನಿಗೆಗೆ ವಿನಾಯಿತಿ ಕೋರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಉದ್ದಿಮೆ ಪರವಾನಿಗೆಯಲ್ಲಿ ವಿನಾಯಿತಿ ಇದ್ದರೂ ಕೂಡಾ ಗದಗ-ಬೆಟಗೇರಿ ನಗರ ಸಭೆಯಿಂದ ಸ್ಥಳೀಯ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕೆಂದು ತಿಳಿಸುತ್ತಿದ್ದಾರೆ. ಈಗಾಗಲೇ ನಗರಸಭೆಗೆ ಪತ್ರದ ಮುಖಾಂತರ ಹಲವಾರು ಬಾರಿ ಕರ್ನಾಟಕ ರಾಜ್ಯಪತ್ರದ ಪ್ರತಿ ಮತ್ತು ಪೌರಾಡಳಿತ ನಿರ್ದೇಶನಾಲಯದವರ ಸುತ್ತೋಲೆ ಪ್ರತಿಯನ್ನು ಕೂಡಾ ನೀಡಿದ್ದರೂ ಅದನ್ನು ಲೆಕ್ಕಿಸದೇ ಪುನಃ ಎಂ.ಎಸ್.ಎಂ.ಇ. ಪರವಾನಿಗೆ ಪಡೆದವರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ ಅವರಿಗೆ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾಹಿತಿ ನೀಡಿ, ನಗರಸಭೆಗೆ ಸೂಕ್ತ ನಿರ್ದೇಶನ ಮಾಡಬೇಕೆಂದು ವಿನಂತಿಸಿದರು.
ನಿಯೋಗದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಿವಯ್ಯ ಆರ್.ನಾಲತ್ವಾಡಮಠ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್.ಕಾಲವಾಡ, ಸೋಮನಾಥ ಕೆ.ಜಾಲಿ, ಕೋಶಾಧ್ಯಕ್ಷ ಸಂಜಯ ಸಿ.ಬಾಗಮಾರ ಉಪಸ್ಥಿತರಿದ್ದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಭಾರತ ಸರ್ಕಾರದ ಕೈಗಾರಿಕಾ ಇಲಾಖೆಯಲ್ಲಿ ನೋಂದಣಿಯಾಗಿರುವ ಉದ್ಯಮಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಉದ್ದಿಮೆ ಪರವಾನಿಗೆ (ಡಿ.ಓ.ಟಿ) ಲೈಸನ್ಸನಲ್ಲಿ ವಿನಾಯತಿ ನೀಡುವ ಕುರಿತು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ಅತೀ ಸಣ್ಣ ಸಣ್ಣ ಮತ್ತು ಮಧ್ಯಮ ಎಂಟರಪ್ರೈಸರ್ ಉದ್ಯಮಗಳು ಜಿಲ್ಲಾ ಕೈಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಉದ್ಯಮಗಳಿಗೆ ನಗರ ಸ್ಥಳೀಯ ಸಂಸ್ಥೆಯಿಂದ ಉದ್ದಿಮೆ ಪರವಾನಿಗೆಯಿಂದ ವಿನಾಯತಿ ನೀಡುವ ಬಗ್ಗೆ 18/12/2017ರಂದು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.



