HomeBengaluru Cityಕಾಯಕ ಸಮಾಜಕ್ಕೆ ಎಂದೂ ಬಡತನವಿಲ್ಲ: ಬಸವರಾಜ ಬೊಮ್ಮಾಯಿ

ಕಾಯಕ ಸಮಾಜಕ್ಕೆ ಎಂದೂ ಬಡತನವಿಲ್ಲ: ಬಸವರಾಜ ಬೊಮ್ಮಾಯಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಶರಣ ಶ್ರೀ ಸಿದ್ದರಾಮೇಶ್ವರರು ಕಾಯಕದ ಮೂಲಕ ಪವಾಡ ಸೃಷ್ಟಿಸಿದವರು. ಕಾಯಕ ಮಾಡುವವರಿಗೆ ಯಾವತ್ತೂ ಬಡತನ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೊಳಂಬ ಲಿಂಗಾಯತ ಸಂಘ ಏರ್ಪಡಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾಹಿತ್ಯಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ದಿವ್ಯ ಪರಂಪರೆ ಹೊಂದಿರುವ ಸಮಾಜ. 12ನೇ ಶತಮಾನದಲ್ಲಿ ಹಲವಾರು ಶರಣರನ್ನು ಸೃಷ್ಟಿಸಿದ ಶ್ರೇಷ್ಠ ಕ್ರಾಂತಿಯಲ್ಲಿ ವಿಭಿನ್ನರಾದವರು ಶ್ರೀ ಸಿದ್ದರಾಮೇಶ್ವರ ಶರಣರು, ಬಸವಣ್ಣನವರ ಕಾಯಕ ತತ್ವವನ್ನು ಪಾಲಿಸಿದ್ದರು ಎಂದು ಹೇಳಿದರು.

ಶ್ರೀ ಸಿದ್ದರಾಮೇಶ್ವರರು ಬಾಲ್ಯದಲ್ಲಿಯೇ ವಯಸ್ಸಿಗೆ ಮೀರಿ ಜ್ಞಾನ ಮತ್ತು ನಡವಳಿಕೆ ಮೂಲಕ ಪವಾಡಪುರುಷರಾಗುವ ಎಲ್ಲ ಗುಣ ಹೊಂದಿದ್ದರು. ಅವರು ಶ್ರೀಶೈಲ ಮಲ್ಲಿಮಾರ್ಜುನನ ಆಶೀರ್ವಾದ ಪಡೆದವರು. ಮಲ್ಲಿಕಾರ್ಜುನ ಭಿಕ್ಷೆಗೆ ಬಂದ ಸಂದರ್ಭದಲ್ಲಿ ಶ್ರೀಶೈಲಕ್ಕೆ ತೆರಳಿ ಅಲ್ಲಿಯೇ ತಪಸ್ಸು ಮಾಡಿ ಶ್ರಿಶೈಲ ಮಲ್ಲಿಕಾರ್ಜುನನ್ನು ಒಲಿಸಿಕೊಳ್ಳುತ್ತಾರೆ. ಕಾಯಕದ ಮೂಲಕ ಪವಾಡ ಸೃಷ್ಟಿಸಿದವರು ಶ್ರೀ ಸಿದ್ದರಾಮೇಶ್ವರರು ಎಂದರು.

ಬಸವಣ್ಣನವರು ಕಾಯಕೇ ಕೈಲಾಸ ಎಂದರು. ಕಾಯಕ ಪೂಜೆಗಿಂತ ದೊಡ್ಡದು. ಭಗವಂತ ಎದುರು ಬಂದರೂ ನಿಮ್ಮ ಕಾಯಕ ನಿಲ್ಲಿಸಬೇಡ ಎಂದು ಬಸವಣ್ಣನವರು ಹೇಳಿದ್ದರು. ಅಂತಹ ಅದಮ್ಯ ಕಾಯಕದ ಮೂಲಕ ಪವಾಡ ಮಾಡಿದವರು ಶ್ರೀ ಸಿದ್ದರಾಮೇಶ್ವರರು. ಸೊಲ್ಲಾಪುರದಲ್ಲಿ ಬರಗಾಲ ಬಂದಾಗ ನಾಲ್ಕು ಸಾವಿರ ಶರಣರನ್ನು ಸೇರಿಸಿ ಕೆರೆ ಕಟ್ಟಿಸಿದರು. ಅದರಲ್ಲಿ ಇಂದಿಗೂ ನೀರಿದೆ ಎಂದು ಹೇಳಿದರು.

ನಾನು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಮಾಜಿ ಸಂಸದ ಬಸವರಾಜು ಅವರ ಜೊತೆ ಎರಡು ದಶಕಗಳ ಕಾಲ ಕೆಲಸ ಮಾಡುವ ಅವಕಾಶ ಪಡೆದಿದ್ದೆ. ಸಣ್ಣ ನಿರಾವರಿ ಇಲಾಖೆಯಲ್ಲಿ ದೊಡ್ಡ ಸಾಧನೆ ಮಾಡಿರುವುದು ಮಾಧುಸ್ವಾಮಿಯವರು. ಅವರು ಬಹಳ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಅವರು ಮಾಡಿರುವ ಕಾರ್ಯಗಳು ಶ್ಲಾಘನೀಯ. ಚಿಕ್ಕನಾಯಕನಹಳ್ಳಿಯ ದೊಡ್ಡ ನಾಯಕ ಮಾಧುಸ್ವಾಮಿಯವರು, ಮಾಜಿ ಸಂಸದ ಬಸವರಾಜು ಅವರು ಹೇಮಾವತಿ ನೀರಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ನೊಳಂಬರ ನಾಡಿನಲ್ಲಿ ನೀರಾವರಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಕೆರೆ ತುಂಬಿಸುವ ಕೆಲಸ ಮಾಡಿದೆ. ಗೋರೂರು ಹೆಬ್ಬೂರು ಏತ ನೀರಾವರಿ ಯೋಜನೆ 30 ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಹದಿನೆಂಟು ತಿಂಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡು, ಪರಮಪೂಜ್ಯ ಶ್ರೀ ಶಿವಕುಮಾರಸ್ವಾಮಿ ಹಾಗೂ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಕೈಯಿಂದ ಉದ್ಘಾಟನೆ ಮಾಡಿಸಿದೆ. ನೀರಾವರಿ ಸಚಿವನಾಗಿ ಸುಮಾರು ಏಳೂವರೆ ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ ಸಂತೃಪ್ತಿ ಇದೆ ಎಂದರು.

ಶರಣರ ಸಾಹಿತ್ಯ ಮತ್ತು ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ. ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗಿದೆ. ನಾಗರಿಕತೆ ಮತ್ತು ಸಂಸ್ಕೃತಿ ಬೇರೆ ಬೇರೆ. ಇದನ್ನು ಅರ್ಥ ಮಾಡಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಈ ಮೂಲಕ ಶ್ರೀ ಸಿದ್ದರಾಮೇಶ್ವರ ಜಯಂತಿ ಆಯೋಜನೆ ಮಾಡಿರುವುಸು ಸಾರ್ಥಕವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಂಗ ಸ್ವಾಮೀಜಿ, ಅರಸೀಕರೆಯ ಜ್ಞಾನಪ್ರಭು ಸ್ವಾಮೀಜಿ, ಶಿವಶಂಕರ ಶಿವಯೋಗಿ ಮಹಾ ಸ್ವಾಮಿಗಳು, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಟಿ. ರವಿ, ನಿವೃತ್ತ ಡಿಜಿಪಿ ಶಂಕರ ಬಿದರಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಕಾಯಕ ಎಂದರೆ ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ಅಲ್ಲ. ಕಾಯಕ ಅಂದರೆ ಪರಿಪೂರ್ಣತೆ. ಆ ಸಂದರ್ಭದಲ್ಲಿ ರೈತರಿಗೆ ನೀರು, ನೀರಾವರಿ ಮಹತ್ವ ಹೇಳಿಕೊಟ್ಟವರು, ಮಣ್ಣಿನ ಮಹತ್ವ, ಬದುಕಿನ ಜೀವಾಳ ಎನ್ನುವುದನ್ನು ತೋರಿಸಿದವರು ಶ್ರೀ ಸಿದ್ದರಾಮೇಶ್ವರರು. ನೊಳಂಬ ಸಮಾಜದಲ್ಲಿ ಕಾಯಕ ಎನ್ನುವುದು ರಕ್ತಗತವಾಗಿ ಬಂದಿದೆ. ಕಾಯಕ ಸಮಾಜಕ್ಕೆ ಎಂದೂ ಬಡತನ, ದುಃಖ ಬರುವುದಿಲ್ಲ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನೊಳಂಬ ಸಮುದಾಯಕ್ಕೆ ಇದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!