ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರನ್ನು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನೋಡಿದ ಪ್ರತಿಯೊಬ್ಬರು ಶಾಕ್ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ವಿಶಾಲ್ ನಡುಗುವ ಕೈ, ತೊದಲು ಮಾತು ನೋಡಿ ಪ್ರತಿಯೊಬ್ಬರು ಕಂಗಲಾಗಿದ್ದರು. ಅಲ್ಲದೆ ಹಲವರು ವಿಶಾಲ್ ಅವರನ್ನು ಟ್ರೋಲ್ ಮಾಡಿದ್ದರು. ಇದೀಗ ತಮ್ಮನ್ನು ಟ್ರೋಲ್ ಮಾಡಿದವರಿಗೆ ವಿಶಾಲ್ ನಡುಗುತ್ತಲೆ ಕಾಲೆಳೆದಿದ್ದಾರೆ.
‘ಮದಗಜರಾಜ’ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಭಾಗಿಯಾದ ವಿಶಾಲ್ ಅವರು ಮೈಕ್ ಅನ್ನು ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಶುರುವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಯ್ಯೋ ಏನಿದು ನಡುಗುತ್ತಿರುವುದು ನಿಲ್ಲುತ್ತಲೇ ಇಲ್ಲವಲ್ಲ ಎಂದರು. ಮತ್ತೆ ಈ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಲ್ಲ ಅಲ್ವಾ? ಎಂದು ತಮಾಷೆಯಾಗಿ ಮಾತನಾಡಿದರು. ಈ ಮೂಲಕ ಟ್ರೋಲ್ ಮಾಡಿದವರಿಗೆ ನಟ ಟಾಂಗ್ ಕೊಟ್ಟಿದ್ದಾರೆ.
ಅಸಲಿಗೆ ವಿಶಾಲ್ ಕೈ ನಡುಗುತ್ತಿರಲಿಲ್ಲ ಬದಲಿಗೆ ಅವರೇ ಬೇಕೆಂದು ತಮಾಷೆಗೆ ಹಾಗೆ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಾವು ಆರೋಗ್ಯವಾಗಿಯೇ ಇರುವುದಾಗಿಯೂ ಹೇಳಿದರು. ಹಿಂದಿಗಿಂತಲೂ ಹೆಚ್ಚು ಉತ್ಸಾಹದಲ್ಲಿಯೂ ಇರುವುದಾಗಿ ವಿಶಾಲ್ ಹೇಳಿದರು. ಈ ಹಿಂದೆ ವೈರಲ್ ಆಗಿದ್ದ ವಿಡಿಯೋದ ಅಸಲಿಯತ್ತೆಂದರೆ ವಿಶಾಲ್ಗೆ ಅಂದು ವಿಪರೀತ ಜ್ವರ ಇತ್ತು, ಆದರೆ ಸಿನಿಮಾ ಪ್ರಚಾರ ಕಾರ್ಯಕ್ರಮವಾದ್ದರಿಂದ, ಅನಾರೋಗ್ಯವನ್ನೂ ಲೆಕ್ಕಿಸದೆ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಹಾಗಾಗಿ ಅವರ ಕೈ ನಡುಗುತ್ತಿತ್ತು, ಮುಖ ಕಳೆಗುಂದಿತ್ತು. ವಿಶಾಲ್ ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ ಎಂಬುದನ್ನು ವಿಶಾಲ್ ಹೇಳಿದ್ದಾರೆ.
12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್ ಆಗಿತ್ತು. ನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 30 ಕೋಟಿ ಕಲೆಕ್ಷನ್ ಮಾಡಿದ್ದು 50 ಕೋಟಿಯತ್ತ ದಾಪುಗಾಲು ಹಾಕಿದೆ. ಹಣಕಾಸಿನ ಸಮಸ್ಯೆ, ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಕಾರಣದಿಂದಾಗಿ ಸಿನಿಮಾ ಇಷ್ಟು ವರ್ಷ ಬಿಡುಗಡೆ ಆಗಿರಲಿಲ್ಲ. ಆದರೆ ಇದೀಗ ಎಲ್ಲವು ಇತ್ಯರ್ಥವಾಗಿದ್ದು ಕಳೆದ ಶುಕ್ರವಾರ ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.