ಹಾಸನ:- ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
20 ವರ್ಷದ ಧನ್ಯಶ್ರೀ ಮೃತ ಮಹಿಳೆ. ಎರಡು ವರ್ಷದ ಹಿಂದೆ ಧನ್ಯಶ್ರೀ ಹಾಗೂ ಪ್ರೇಮ್ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೇಮ್ಕುಮಾರ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತವರು ಮನೆಗೆ ಹೋಗಿದ್ದ ಧನ್ಯಶ್ರೀ ಭಾನುವಾರ ಅತ್ತೆ ಮನೆಗೆ ವಾಪಸ್ ಬಂದಿದ್ದಳು. ಆ ವೇಳೆ ಯಾಕೆ ವರದಕ್ಷಿಣೆ ತಂದಿಲ್ಲ ಎಂದು ಜಗಳ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.
ಇದೇ ಸಮಯದಲ್ಲಿ ಪತಿಯೊಂದಿಗೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಮಹಿಳೆ ನಿನ್ನೆ ಅಂದರೆ ಸೋಮವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.



