ಬೆಂಗಳೂರು:- ಮೂತ್ರಕೋಶದ ಕ್ಯಾನ್ಸರ್ ಚಿಕಿತ್ಸೆ ಸಂಬಂಧ ಅಮೇರಿಕಕ್ಕೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು ತಾಯ್ನಾಡಿಗೆ ಮರಳಿದ್ದಾರೆ.
ಡಿ.18 ರಂದು ಮೂತ್ರಕೋಶದ ಕ್ಯಾನ್ಸರ್ ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಡಿ.34 ರಂದು ಆಪರೇಷನ್‌ಗೆ ಒಳಗಾಗಿದ್ದು, ಇತ್ತೀಚಿಗಷ್ಟೇ ಶಿವಣ್ಣ ತಾಯ್ನಾಡಿಗೆ ಬರುವ ಸಿಹಿ ಸುದ್ದಿಯನ್ನು ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳಿದ್ದಾರೆ.
ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆ 9ರ ಆಸುಪಾಸಿನಲ್ಲಿ ಬೆಂಗಳೂರಿನ ಏರ್ಪೋಟ್‌ನಲ್ಲಿ ಲ್ಯಾಂಡ್ ಆಗಿದ್ದು, ಬಳಿಕ ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ ಆಗಮನ ಗೇಟ್ 1ರಲ್ಲಿ ಹೊರಬಂದಿದ್ದಾರೆ.
ಶಿವಣ್ಣನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಆಗಮಿಸಿದ್ದರು. ವಿಮಾನ ನಿಲ್ದಾಣದ ಬಳಿಯ ಟೋಲ್ ಗೇಟ್ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಆಪಲ್ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ.