ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗುಣಮುಖರಾಗಿ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸುಮಾರು ಒಂದು ತಿಂಗಳುಗಳ ಕಾಲ ಅಮೆರಿಕಾದಲ್ಲಿದ್ದ ಶಿವರಾಜ್ ಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದು ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ನೆರದಿತ್ತು. ಗುಣ ಮುಖರಾಗಿ ಬಂದ ಶಿವರಾಜ್ ಕುಮಾರ್ ನೋಡಿ ಅಭಿಮಾನಿಗಳು ಸಂಭ್ರಮಿಸಿದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅಭಿಮಾನಿಗಳು ಶಿವರಾಜ್ ಕುಮಾರ್ ಅವರಿಗೆ ಹೂಮಳೆ ಸುರಿಸಿ ಸ್ವಾಗತಿಸಿದರು. ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ನೆಚ್ಚಿನ ನಟನ ಸ್ವಾಗತ ಮಾಡುವ ವೇಳೆ ಅಭಿಮಾನಿಗಳ ನಡುವೆ ನೂಕುನುಗ್ಗಲು ಕೂಡ ಸಂಭವಿಸಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.
ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆ 9ರ ಆಸುಪಾಸಿನಲ್ಲಿ ಬೆಂಗಳೂರಿನ ಏರ್ಪೋಟ್‌ನಲ್ಲಿ ಲ್ಯಾಂಡ್ ಆಗಿದ್ದು, ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ ಆಗಮನ ಗೇಟ್ 1ರಲ್ಲಿ ಹೊರಬಂದಿದ್ದಾರೆ.
ಇನ್ನೂ ಮನೆ ಬಳಿ ಶಿವಣ್ಣರನ್ನ ಸ್ವಾಗತಿಸಲು 500ಕೆ.ಜಿ ಹೂಗಳನ್ನ ತಯಾರಿ ಮಾಡಿಕೊಂಡಿರುವ ದೊಡ್ಮನೆ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಮೂರು ಜೆಸಿಬಿಗಳ ಮೂಲಕ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರಿಗೆ ಹೂ ಹಾಕಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದು, ನಾಗವಾರದ ನಿವಾಸದ ಬಳಿ ಅಭಿಮಾನಿಗಳು ದಂಡು ಹರಿದು ಬಂದಿದೆ.