ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂತಸದ ಸುದ್ದಿಯನ್ನು ಧನಂಜಯ್ ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಇತ್ತೀಚೆಗಷ್ಟೇ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು “Our universe is expanding” ಎಂಬ ಕ್ಯಾಪ್ಷನ್‌ನೊಂದಿಗೆ ಪೋಸ್ಟ್ ಮಾಡಿದ್ದರು.
2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ಅವರು ಡಾ. ಧನ್ಯತಾ ಅವರನ್ನು ವಿವಾಹವಾಗಿದ್ದರು. ಮದುವೆ ಹಾಗೂ ಆರತಕ್ಷತೆ ಸಮಾರಂಭಗಳಲ್ಲಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಭಾಗವಹಿಸಿ ದಂಪತಿಗೆ ಶುಭಹಾರೈಸಿದ್ದರು.
ಇದೀಗ ಗಂಡು ಮಗುವಿನ ಆಗಮನದೊಂದಿಗೆ ಧನಂಜಯ್ ಕುಟುಂಬದಲ್ಲಿ ಸಂಭ್ರಮ ಹೆಚ್ಚಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದವರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.



