ಚಿತ್ರದುರ್ಗ: ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಲ್ಲೇ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವುದಾದರೆ ರಾಜೀನಾಮೆ ನೀಡಿ ಹೊರಹೋಗಲಿ ಎಂದು ನೇರ ಸವಾಲು ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್ನಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿತು ಎಂಬ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ರಾಜಣ್ಣ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕಿದರು.
ರಾಜೇಂದ್ರ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರಾ? ಬಾಲಕೃಷ್ಣ ಪ್ರಶ್ನೆ
ಸಿದ್ದರಾಮಯ್ಯ ಅವರ ಸ್ಟಿಂಗ್ ವಿಚಾರವಾಗಿ ಮಾತನಾಡುವ ಮೊದಲು, ರಾಜಣ್ಣ ಅವರ ಪುತ್ರ ರಾಜೇಂದ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಬಾಲಕೃಷ್ಣ ಸವಾಲು ಹಾಕಿದರು.
ಚುನಾವಣೆ ಮುಗಿಯುವ ಮೊದಲೇ ರಾಜೇಂದ್ರ ಅವರು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ರಾಜೇಂದ್ರ ಎದೆ ಮುಟ್ಟಿಕೊಂಡು ಹೇಳಲಿ ಎಂದು ಪ್ರಶ್ನಿಸಿದರು.
‘ಪಕ್ಷಕ್ಕೆ ದ್ರೋಹ ಬಗೆಯುವುದಾದರೆ ರಾಜೀನಾಮೆ ನೀಡಿ’
ರಾಜಣ್ಣ ಕುಟುಂಬದ ಪಕ್ಷವಿರೋಧಿ ಚಟುವಟಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಬಾಲಕೃಷ್ಣ, ಪಕ್ಷದೊಳಗಿದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು ಎಂದರು.
“ಪಕ್ಷದಲ್ಲೇ ಇದ್ದು ಅನ್ನ ತಿಂದು ದ್ರೋಹ ಬಗೆಯುವುದಾದರೆ ಪಕ್ಷ ಬಿಟ್ಟು ಹೋಗಲಿ. ತಾಕತ್ತಿದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಹೋಗಲಿ” ಎಂದು ಕಿಡಿಕಾರಿದರು.
ಇದೇ ವೇಳೆ, ರಾಜಣ್ಣ ಅವರೊಂದಿಗೆ ಬಹಿರಂಗವಾಗಿ ಪ್ರಮಾಣ ಮಾಡಲು ಸಿದ್ಧ ಎಂದು ಸವಾಲು ಹಾಕಿದರು. “ಅವರು ಯಾವ ದೇವಸ್ಥಾನಕ್ಕೆ ಕರೆಯುತ್ತಾರೋ ಅಲ್ಲಿಗೆ ನಾನು ಬರಲು ಸಿದ್ಧ. ಅಲ್ಲಿ ಪ್ರಮಾಣ ಮಾಡಿ ಸತ್ಯ ಹೇಳುತ್ತೇನೆ. ರಾಜಣ್ಣ ಅವರೂ ಅಲ್ಲಿಗೆ ಬಂದು ಪ್ರಮಾಣ ಮಾಡಲಿ” ಎಂದು ಹೇಳಿದರು.







