ಶಿಕ್ಷಣ ವ್ಯವಸ್ಥೆ ಪ್ರಶ್ನಿಸುತ್ತಾ…ಉತ್ತರ ಕಂಡುಕೊಳ್ಳುತ್ತಾ…; ಯುವರತ್ನ ಸಿನಿಮಾ ವಿಮರ್ಶೆ

0
Spread the love

ವಿಜಯಸಾಕ್ಷಿ ಸಿನಿಮಾ ಸುದ್ದಿ- ಬಸವರಾಜ ಕರುಗಲ್
“Education is not a business, is a service”
ಇದು ಯುವರತ್ನ ಸಿನಿಮಾದ ಕ್ಲೈಮಾಕ್ಸ್ ನಂತರ ಕೊನೆಯಲ್ಲಿ ಬರೋ ಡೈಲಾಗ್.. ಇಡೀ ಸಿನಿಮಾದ ತಿರುಳೇನು ಎಂಬ ಪ್ರಶ್ನೆಗೆ ಸಂಕ್ಷಿಪ್ತ ಉತ್ತರವೂ ಇದೆ..
ಲಾಕ್‌ಡೌನ್‌ಗಿಂತ ಮುಂಚೆ ಬಿಡುಗಡೆಯಾಗಿದ್ದ ಶಿವಣ್ಣ ಅಭಿನಯದ ದ್ರೋಣ ಸಿನಿಮಾದ ಕಥಾಹಂದರ ಹೋಲುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿರೊ ನಿರ್ದೇಶಕ ಸಂತೋಷ್ ಆನಂದ್‌ರಾಮ್, ಸಣ್ಣ ಬದಲಾವಣೆಯೊಂದಿಗೆ ಪುನೀತ್ ಅವರನ್ನ ಯುವರತ್ನನನ್ನಾಗಿ ತೆರೆಗೆ ತಂದಿದ್ದಾರೆ. ದ್ರೋಣದಲ್ಲಿ ಶಿವಣ್ಣ ಸರಕಾರಿ ಶಾಲೆಗಳ ಪರವಾಗಿ ಹೋರಾಟ ಮಾಡಿದ್ದರೆ, ಯುವರತ್ನದಲ್ಲಿ ಪುನೀತ್ ಸರಕಾರಿ ಕಾಲೇಜುಗಳ ಪರವಾಗಿ ಎದೆಯುಬ್ಬಿಸಿ ಕಾದಾಡಿ ಭರ್ಜರಿ‌ ಮನರಂಜನೆ‌ ನೀಡಿದ್ದಾರೆ.
ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆನ್ನುವ ಮಹದಾಸೆಯಿಂದ ಹೆಣೆದಿರುವ ಯುವರತ್ನ ಕಥೆ ಪ್ರಸ್ತುತ ದಿನಗಳಿಗೆ ಹೊಂದಿಕೊಂಡಿದೆ. ಖಾಸಗಿ ಕಾಲೇಜುಗಳ ಉದ್ದೇಶ ತಿಳಿಸುತ್ತಲೇ ಸರಕಾರಿ ಕಾಲೇಜುಗಳು ಉಳಿಯಬೇಕು ಎನ್ನುವ ಕಳಕಳಿ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಚಿತ್ರದ ಮೊದಲಾರ್ಧ ವಿದ್ಯಾರ್ಥಿ ರೂಪದಲ್ಲಿ ಎಂಟ್ರಿ ಕೊಡುವ ಪುನೀತ್ ವಿರಾಮದ ಹೊತ್ತಿಗೆ ಟಾಸ್ಕ್ ಮೇಲೆ ಕಾಲೇಜಿಗೆ ಬಂದಿರೋದಾಗಿ ಹೇಳಿ ಟ್ವಿಸ್ಟ್ ಕೊಡ್ತಾರೆ. ಸ್ಟ್ರೇಟ್ ಫಾರ್‌‌ವರ್ಡ್ ಆಗಿರೋ ಅರ್ಜುನ ಅಲಿಯಾಸ್ ಯುವರಾಜ ಬರೀ ತನ್ನ ತಂಟೆ ಅಲ್ಲ, ತನ್ನ ಕಾಲೇಜಿನ ತಂಟೆಗೆ ಬಂದ್ರೆ ಯಾರನ್ನೂ ಬಿಡಲ್ಲ. ಅಷ್ಟಕ್ಕೂ ಆ ಕಾಲೇಜಿನ ಮೇಲೆ ಯುವರಾಜನಿಗೆ ಯಾಕಷ್ಟು ಪ್ರೀತಿ? ಆ ಕಾಲೇಜಿನಲ್ಲಿ ಆತನ‌ ಕೆಲಸ ಏನು? ಕಾಲೇಜಿನ ಮೇಲೆ ಖಳರ ಕಣ್ಣೇಕೆ? ಇವುಗಳಿಗೆ ಉತ್ತರ ಗೊತ್ತಾಗಬೇಕಾದರೆ ಯುವರತ್ನ ಸಿನಿಮಾನಾ ಥೇಟರ್‌ನಲ್ಲೇ ನೋಡಬೇಕು.
ಚಿತ್ರದ ನಿಜವಾದ ಕಥೆ ತೆರೆದುಕೊಳ್ಳೋದೇ ವಿರಾಮದ‌ ನಂತರ. ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೇಣಿಗೆ ಶರಣಾಗುವ ಮೂಲಕ ಆರಂಭವಾಗುವ ಕಥೆ ಕ್ರಮೇಣ ಆಪ್ತವಾಗುತ್ತಾ ಹೋಗುತ್ತದೆ. ಜಾಗತೀಕರಣದ ಕಬಂಧಬಾಹುಗಳು, ನಮ್ಮೊಳಗೆ ಇರೋ ಉಪ್ಪಿನ ದ್ರೋಹಿಗಳ ಅನಾವರಣಗೊಳಿಸುವ ರೀತಿ ಇಷ್ಟವಾಗುತ್ತದೆ. ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾದ ನೆರಳು ಅಲ್ಲಲ್ಲಿ ಕಾಣುತ್ತದೆಯಾದರೂ ಆವರಿಸಿಲ್ಲ.
ರಾಜಕುಮಾರ್ ಚಿತ್ರದ ಬಳಿಕ ಪುನೀತ್-ಸಂತೋಷ್ ಸಿನಿಮಾ ಯುವರತ್ನ. ಸಿಕ್ಕಾಪಟ್ಟೆ ನಿರೀಕ್ಷೆ ಕ್ರಿಯೆಟ್ ಮಾಡಿದ್ದು, ನಿರೀಕ್ಷೆ ಹುಸಿಯಾಗಿಲ್ಲ. ಕಮರ್ಷಿಯಲ್ ಅಂಶಗಳ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಹೊತ್ತು ತಂದಿದ್ದಾನೆ ಯುವರತ್ನ.
ಇಡೀ ಸಿನಿಮಾ ಕಾಲೇಜಿನ ಸುತ್ತ ಗಿರಕಿ ಹೊಡೆಯುತ್ತದೆ. ಕೆಲವು ಭಾಗವಷ್ಟೇ ಬೇರೆಡೆ ಲೋಕೇಷನ್. ಕಾಲೇಜು ವಿದ್ಯಾರ್ಥಿಗಳಿಗೆ ಯುವರತ್ನ ಹಿಡಿಸುತ್ತಾನೆ. ಹಾದಿ ತಪ್ಪಿದವರನ್ನ ಸರಿ ದಾರಿಗೆ ತರುವ, ಸರಿ ದಾರಿಗೆ ಬರದವರನ್ನ ಬೆಂಡೆತ್ತುವ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅಭಿನಯದಲ್ಲಿ, ಫೈಟ್‌ನಲ್ಲಿ, ಡ್ಯಾನ್ಸ್‌ನಲ್ಲೂ ಪುನೀತ್‌ಗೆ ಫುಲ್ ಸ್ಕೋರ್. ಇಡೀ ಸಿನಿಮಾನ ಹೊತ್ತು ನಿಂತಿರೋದು ಪ್ರಕಾಶ್ ರಾಜ್, ಕಾಲೇಜಿನ ಪ್ರಿನ್ಸಿಪಾಲ್ ಪಾತ್ರ ಅವರಿಗೆ ಹೊಂದಿಕೊಂಡಿದೆ. ರಾಜಕಾರಣಿಯಾಗಿ ಸಾಯಿಕುಮಾರ್, ಬ್ಯುಜಿನೆಸ್‌ ಮ್ಯಾನ್ ಆಗಿ ಡಾಲಿ ಧನಂಜಯ್, ವೈಸ್ ಪ್ರಿನ್ಸಿಪಾಲ್ ಆಗಿ ಅವಿನಾಶ್, ಕಲೆಕ್ಟರ್ ಆಗಿ ದಿಗಂತ್ ಚನ್ನಾಗಿ ಅಭಿನಯಿಸಿದ್ದಾರೆ.
ಜಾಸ್ತಿ ಒಳ್ಳೇಯರಾಗಬೇಡ್ರೋ.. ಒಂಚೂರು ಕೆಟ್ಟವರಾಗಿ.. ನಾನು ಕೆಟ್ಟವನಾದ ಮೇಲೆ ಉದ್ಧಾರ ಆಗಿದ್ದು ಎಂಬ ಡೈಲಾಗ್ ಹೇಳೋ ಧನಂಜಯ ಪರೋಕ್ಷವಾಗಿ ಟಗರು ಸಿನಿಮಾ ನೆನೆಸುವಂಥ ಅಪ್ಡೇಟ್ ಸಂಭಾಷಣೆ, ಏನ್ ಮಾಡೋದು ನಂಗೂ ನಮ್ಮಣ್ಣನಿಗೂ ವಯಸ್ಸೇ ಆಗಲ್ಲ ಎಂಬ ಪುನೀತ್-ಶಿವಣ್ಣನ ಫಿಟ್‌ನೆಸ್ ಬಗ್ಗೆ ಹೇಳುವ ಮಾತುಗಳು ಖುಷಿ ಜೊತೆ ಚಪ್ಪಾಳೆ ಗಿಟ್ಟಿಸುತ್ತವೆ.
ತಮನ್ ಸಂಗೀತದಲ್ಲಿ ಮೂರು ಹಾಡುಗಳಿಗೆ ಗುನುಗುನಿಸುವ ಗುಣವಿದೆ. ಆದರೆ ತಮನ್ ಹೆಚ್ಚು ಇಷ್ಟ ಆಗೋದು ಹಿನ್ನೆಲೆ ಸಂಗೀತದಲ್ಲಿ. ಮೈನವಿರೇಳಿಸುವ ಚೇಜಿಂಗ್ ಸೀನ್, ಫೈಟ್ಸ್ ಅಭಿಮಾನಿಗಳಿಗೆ ಹಬ್ಬ.
ಇಡೀ ಸಿನಿಮಾ ಮುಗಿದು ಹೊರ ಬಂದ ಮೇಲೆ ಕಾಮಿಡಿ, ಸೆಂಟಿಮೆಂಟ್ ಒಂಚೂರು ಇದ್ದಿದ್ದರೆ ಚನ್ನಾಗಿತ್ತು ಅನ್ಸುತ್ತೆ. ಕಾಮಿಡಿಗೆ ಅಂತಾನೇ ರಂಗಾಯಣ ರಘು, ರವಿಶಂಕರಗೌಡ, ಸಾಧುಕೋಕಿಲ, ಕುರಿ ಪ್ರತಾಪ್‌ ಇದ್ದಾರಾದರೂ ಕಾಮಿಡಿ ವರ್ಕ್ ಆಗಿದ್ದು ಪುನೀತ್ ಅವರ ಡೈಲಾಗ್‌ಗಳಲ್ಲೇ. ನಾಯಕಿ ಸಾಯೇಶಾಗೆ ಅಷ್ಟಾಗಿ ಸ್ಕೋಪ್ ಇಲ್ಲದಿದ್ದರೂ ಬ್ಯೂಟಿಯಿಂದ ಸ್ಕೋರ್ ಮಾಡಿದ್ದಾರೆ. ಅಚ್ಯುತ್‌ಕುಮಾರ್, ಸೋನುಗೌಡ ನೆನಪಲ್ಲುಳಿಯುತ್ತಾರೆ. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರೊ ಪುನೀತ್ ಇವತ್ತಿನ ಯುಥ್ಸ್‌ಗೆ, ಪೇರೆಂಟ್ಸ್‌ಗೆ ಯುವರತ್ನದಲ್ಲಿ ಚನ್ನಾಗಿ ಪಾಠ ಮಾಡಿದ್ದಾರೆ.
ಕುಟುಂಬ ಸಮೇತ ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿಗಳು ಫ್ರೆಂಡ್ಸ್ ಜೊತೆ ಯುವರತ್ನನನ್ನ ಕಣ್ತುಂಬಿಕೊಳ್ಳಬಹುದು.

Advertisement

Spread the love

LEAVE A REPLY

Please enter your comment!
Please enter your name here