ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಳ್ಳಿಹೈದ ಹನುಮಂತ ಈ ಸೀಸನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ.
ಈ ಬಾರಿಯ ಬಿಗ್ ಬಾಸ್ನಲ್ಲಿ ಒಟ್ಟೂ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಅವರು ಕಪ್ನ ಒಲಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಯಾರೇ ನಾಮಿನೇಟ್ ಮಾಡಲಿ, ಯಾರು ಏನೇ ಕಾರಣ ಕೊಡಲಿ, ಅವರನ್ನು ಕಳಪೆಗೆ ಹಾಕಲಿ ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಆಡಿದರು. ಅದಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ. ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
ಹನುಮಂತನ ಪರವಾಗಿ ಅನಕೇರು ವೋಟ್ ಮಾಡುವಂತೆ ಕೋರಿದ್ದರು. ಉತ್ತರ ಕರ್ನಾಟಕ ಮಂದಿ ಹನುಮಂತಗೆ ಭರ್ಜರಿ ವೋಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲದೆ, ಎಲ್ಲಾ ಭಾಗದ ಜನರಿಗೂ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರಿಗೆ 5 ಕೋಟಿ ವೋಟ್ ಬಿದ್ದಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಜನರಿಗೆ ಇಷ್ಟವಾದ ಹನುಮಂತಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.