ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳದ ಮೆಡಿಕಲ್ ಕಾಲೇಜಿನ ಐದನೇ ಸೆಮಿಸ್ಟರ್‌ನ ಬೆಂಗಳೂರು ಮೂಲದ ವಿದ್ಯಾರ್ಥಿನಿ ನಿದಾ ರೆಹಮಾನ್ (22) ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಾಲೇಜಿನ ಶುಲ್ಕ ಕಟ್ಟಲು ಆರ್ಥಿಕವಾಗಿ ಸಬಲರಲ್ಲದ ಕುಟುಂಬದ ಈ ಯುವತಿಗೆ ಹಲವು ದಿನಗಳಿಂದ ಶುಲ್ಕ ಕಟ್ಟುವಂತೆ ಕಾಲೇಜಿನ ಆಡಳಿತ ಮಂಡಳಿ ಒತ್ತಾಯಿಸುತ್ತಿತ್ತು ಎನ್ನಲಾಗಿದೆ. ಯುವತಿಯ ಆತ್ಮಹತ್ಯೆಗೆ ಶುಲ್ಕ ಪಾವತಿಸಲು ಆಗದಿರುವುದು ಕಾರಣವೊ? ಅಥವಾ ಬೇರೆನಾದರೂ ಕಾರಣಗಳಿವೆಯೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಈಗಾಗಲೇ ಶವಪರೀಕ್ಷೆ ನಡೆದಿದ್ದು, ವಿಪರೀತ ನಿದ್ದೆ ಮಾತ್ರೆ ತೆಗೆದುಕೊಂಡಿದ್ದರಿಂದ ಸಾವು ಸಂಭವಿಸಿದೆ ಎನ್ನಲಾಗಿದೆ. ನಿದಾ ರೆಹಮಾನ್ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಬಹಿರಂಗವಾಗಿದೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಮಾನಸಿಕ ಒತ್ತಡಕ್ಕೊಳಗಾಗಿದ್ದ ಯುವತಿ ಸಾವಿಗೆ ಶರಣಾಗಿರಬಹುದು ಎಂದು ತಿಳಿದು ಬಂದಿದ್ದು, ಈ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ನಿಜಾಂಶ ಗೊತ್ತಾಗಲಿದೆ.
ಈ ಕುರಿತು ಕಿಮ್ಸ್‌ನ ನಿರ್ದೇಶಕ ಡಾ.ಇಟಗಿಯವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತಾದರೂ ಅವರು ಕಾಲ್ ರಿಸೀವ್ ಮಾಡಲಿಲ್ಲ. ಯುವತಿಯ ಪೋಷಕರು ಸಹ ಈ ಕುರಿತು ಮಾಹಿತಿ ನೀಡಲು ನಿರಾಕರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.