ಪ್ರತಿಯೊಂದು ಹಣ್ಣಿನಲ್ಲೂ ಒಂದೊಂದು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ಸೇವಿಸಿದಾಗ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಒಳ್ಳೆಯ ವಿಟಮಿನ್ ಗಳು ಪ್ರೋಟೀನ್ ಗಳು ಸಿಗುತ್ತವೆ. ಆದರೆ ಕೆಲವರು ಸೀಮಿತ ಹಣ್ಣುಗಳನ್ನು ಮಾತ್ರ ಕೊಳ್ಳುತ್ತಾರೆ. ಕೆಲವೊಂದು ತಪ್ಪು ತಿಳುವಳಿಕೆಯಿಂದ ಅಥವಾ ಅದರ ರುಚಿ ಹೇಗಿರುತ್ತದೋ ಎಂಬ ಕಾರಣದಿಂದ ಕೆಲವಷ್ಟು ಹಣ್ಣಿಗಳಿಂದ ದೂರವೇ ಇರುತ್ತಾರೆ. ಅಂಥ ಹಣ್ಣುಗಳಲ್ಲೊಂದು ಸೀತಾಫಲ. ವಿಟಮಿನ್ ಬಿ6 ಹೇರಳವಾಗಿರುವ ಈ ಹಣ್ಣು ಆರೋಗ್ಯಕ್ಕೆ ಅದ್ಭುತವೆನಿಸುವ ಕೊಡುಗೆಗಳನ್ನು ನೀಡುತ್ತದೆ.
ಸೀತಾಫಲದ ಆರೋಗ್ಯ ಪ್ರಯೋಜನಗಳು
ಸೀತಾಫಲದಲ್ಲಿ ವಿಟಮಿನ್ ಎ ಅಂಶವಿರುತ್ತದೆ. ಇದು ನಿಮ್ಮ ತ್ವಚೆ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಕಬ್ಬಿಣಾಂಶವನ್ನು ಪಡೆದುಕೊಳ್ಳಬಹುದು. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅತಿಸಾರ, ಬೇಧಿ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸೀತಾಫಲದಲ್ಲಿ ಮೆಗ್ನೀಶಿಯಮ್ ಅಂಶವಿದೆ. ಇದು ದೌರ್ಬಲ್ಯದಿಂದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಬಿ6 ಅಂಶವಿದೆ. ಈ ಹಣ್ಣಿನಿಂದ ಸಿಗುವ ಸಾಕಷ್ಟು ಪೋಷಕಾಂಶಗಳಿಂದ ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಜೊತೆಗೆ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೀತಾಫಲವು ಕ್ಯಾಟೆಚಿನ್ಗಳು, ಎಪಿಕಾಟಿನ್ಗಳು ಮತ್ತು ಎಪಿಗಲ್ಲೊಕಾಟೆಚಿನ್ಗಳಂಥಹ ಅಂಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೀತಾಫಲವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕವಾಗಿರುವುದರಿಂದ ಇದು ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಅಲ್ಲದೆ ಸೀತಾಫಲ ಹಣ್ಣು ಹೆಚ್ಚಿನ ಕಬ್ಬಿಣಾಂಶವನ್ನು ಹೊಂದಿದ್ದು, ಇದು ರಕ್ತಹೀನತೆಯನ್ನು ತಡೆಯುತ್ತದೆ.