ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಗಾಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ 1 ರನ್ ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಟೆಸ್ಟ್ನಲ್ಲಿ 10000 ರನ್ ಪೂರೈಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (13378) ಹಾಗೂ ಅಲನ್ ಬಾರ್ಡರ್ (11174) ಈ ದಾಖಲೆ ಬರೆದಿದ್ದರು. ಇದೀಗ ಈ ಸಾಧಕ ಪಟ್ಟಿಗೆ ಸ್ಟೀವ್ ಸ್ಮಿತ್ ಕೂಡ ಎಂಟ್ರಿಯಾಗಿದ್ದಾರೆ.
ಅಷ್ಟೇ ಅಲ್ಲದೇ ಟೆಸ್ಟ್ ಇತಿಹಾಸದಲ್ಲಿ 10 ಸಾವಿರ ರನ್ ಕಲೆಹಾಕಿದ ವಿಶ್ವದ 15ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನು ಈ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 5ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ರಾಹುಲ್ ದ್ರಾವಿಡ್ ಇದ್ದರು.