ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕ್ಯಾನ್ಸರ್ ರೋಗವನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ರೋಗಿಗಳು ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಹುಬ್ಬಳಿಯ ತಜ್ಞವೈದ್ಯ ಡಾ. ತೇಜೇಶ್ ಯಳಮಲಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳ ಕಾರ್ಯಾಲಯ, ಲಕ್ಮೇಶ್ವರ ಸಮುದಾಯದ ಅರೋಗ್ಯ ಕೇಂದ್ರ, ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿದಲ್ಲಿ ಮಾತನಾಡಿದರು.
ದೀರ್ಘಕಾಲದಿಂದ ಮಾಯದ ಹುಣ್ಣು, ಗಡ್ಡೆಯಲ್ಲಿ ತ್ವರಿತ ಬೆಳವಣಿಗೆ, ಧ್ವನಿಯಲ್ಲಿ ಬದಲಾವಣೆ, ನುಂಗಲು ತೊಂದರೆ, ತೀವ್ರ ನೋವು, ಸುಸ್ತು ಹೀಗೆ ಕ್ಯಾನ್ಸರ್ ರೋಗದ ಲಕ್ಷಣಗಳು ಇರುತ್ತವೆ. ಅವುಗಳನ್ನು ಪ್ರಾರಂಭದಲ್ಲಿ ಗುರುತಿಸಿ ಚಿಕಿತ್ಸೆ ಪಡೆಯಬೇಕು. ರೋಗಿಗಳ ಸಂಭಾಷಣೆಯ ಗೌಪ್ಯವಾಗಿ ಇಡಲಾಗುವುದು. ಕ್ಯಾನ್ಸರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ, ರೋಗಿಗಳು ಆತ್ಮಸ್ಥೈರ್ಯದೊಂದಿಗೆ ಚಿಕಿತ್ಸೆಗೊಳಗಾಗಬೇಕು ಎಂದರು.
ಸಮುದಾಯ ಅರೋಗ್ಯ ಕೇಂದ್ರದ ದಂತ ವೈದ್ಯ ಡಾ. ಪ್ರವೀಣ ಸಜ್ಜನ ಮಾತನಾಡಿ, ಕ್ಯಾನ್ಸರ್ ರೋಗಿಯ ಕಾಳಜಿ ಬಗ್ಗೆ ಮನೆಯವರು ಹಾಗೂ ಆಪ್ತರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಭಯಪಡದೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಸಮುದಾಯ ಅರೋಗ್ಯ ಕೇಂದ್ರದ ಡಾ. ಶ್ರೀಕಾಂತ ಕಾಟೆವಾಲೆ, ಎನ್ಸಿಡಿ ಮೆಡಿಕಲ್ ಆಫೀಸರ್ ಡಾ. ಬಿಸ್ಮಿಲ್ಲಾ ವಲ್ಲೆಬಾಯಿ, ಹುಬ್ಬಳ್ಳಿಯ ಡಾ. ಜಗದೀಶ ತುಗಚಿ, ಪಿಆರ್ಓ ನವೀನ ಮಾಟರಂಗಿ, ನರ್ಸ್ ಮಂಜುಳಾ ಸೇರಿ ವೈದ್ಯರ ತಂಡದವರಿದ್ದರು.