HomeGadag Newsಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ದುಂದುವೆಚ್ಚದ ಮದುವೆಗೆ ನಮ್ಮ ಜನರು ಆಸ್ತಿ, ಬಂಗಾರ, ಹಣ ಕಳೆದುಕೊಂಡು ಹಣಕಾಸಿನ ತೊಂದರೆ ಅನುಭವಿಸುತ್ತಾರೆ. ಹೊಲ, ಮನೆಗಳ ಮೇಲೆ ಸಾಲ ಮಾಡಿ ಶೂಲದಲ್ಲಿ ಸಿಲುಕುತ್ತಾರೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ನೆಮ್ಮದಿಯ ಬದುಕಿಗೆ ಸಹಾಯವಾಗುವುದು ಎಂದು ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಶ್ರೀ ಡಾ. ಕಲ್ಲಯ್ಯಜ್ಜನವರು ನುಡಿದರು.

ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರಶರಣರ ಮಠದಲ್ಲಿ ಶ್ರೀ ಚನ್ನವೀರಶರಣರ 30ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಚನ್ನವೀರಶರಣರು ಶಿವಯೋಗಿಗಳಾಗಿ ಬಂದವರು, ತ್ರಿಕಾಲಜ್ಞಾನಿಗಳಾಗಿದ್ದವರು. ಅವರ ಪುಣ್ಯಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಹೊಂದಿ ಆದರ್ಶದ ದಾಂಪತ್ಯ ಜೀವನ ಬದುಕಿ, ಉಳಿದ ಜನರಿಗೆ ಮಾದರಿಯಾಗುವ ರೀತಿಯಲ್ಲಿ ಕುಟುಂಬ ಜೀವನ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಮುದಗಲ್ಲ ಮಹಾಂತಸ್ವಾಮೀಜಿ ಮಾತನಾಡಿ, ವಿವಾಹ ಕಲ್ಯಾಣ ಮಹೋತ್ಸವದಲ್ಲಿ ಭಾಗಿಗಳಾದ ದಂಪತಿಗಳು ಭಾಗ್ಯಶಾಲಿಗಳು. ಶರಣರ ಭಕ್ತಿ ಪರಂಪರೆ ಬೆಳೆಸಿಕೊಂಡು ಶರಣ ಧರ್ಮದ ಜೀವನ ನಿರ್ವಹಿಸಿ ದಾಂಪತ್ಯ ಧರ್ಮ ಪಾಲಿಸಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಹುಣಸಿಯ ನಿವೃತ್ತ ಶಿಕ್ಷಕ ದಿ. ಕೆ.ಬಿ. ಕಂಬಳಿ ವಿರಚಿತ ಶ್ರೀ ಚನ್ನವೀರ ಶರಣರ ಲೀಲಾಮೃತ ‘ಮೌನಯೋಗಿ’ 4ನೇ ಮುದ್ರಣ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗುಂಡೂರಿನ ಎಸ್.ವ್ಹಿ. ಪಾಟೀಲ ಅವರಿಗೆ ಶ್ರೀ ಶರಣರಮಠ ಬಳಗಾನೂರ ಹಾಗೂ ಸಿದ್ದಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಇವರ ಸಹಯೋಗದಲ್ಲಿ ‘ಶರಣಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಹಿರೇಮಾಗಡಿಯ ಮ.ನಿ.ಪ್ರ. ಶಿವಮೂರ್ತಿ ಮುರಘರಾಜೇಂದ್ರ ಮಹಾಸ್ವಾಮಿಗಳು ಸನ್ನಿಧಾನ ವಹಿಸಿದ್ದರು. ಶಿವಪ್ರಕಾಶ ಶರಣರು ಶಿವಯೋಗಿ ದೇವರು ವೇದಿಕೆಯಲ್ಲಿದ್ದರು. ಶ್ರೀ ಶಿವಶಾಂತವೀರ ಶರಣರು ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರ ಸೇವೆ ಜರುಗಿದವು. ಶರಣರ ವಿದ್ಯಾಪೀಠದ ಮಕ್ಕಳಿಂದ ಯೋಗ ಪ್ರದರ್ಶನ ಜರುಗಿತು. ಉಡುಪಿಯ ಸ್ವರ ಚಿತ್ತಾರ ಕಲರ್ಸ್ ಕನ್ನಡ ಖ್ಯಾತಿಯ ಕಲಾಸಿಂಧು ಕಲಾವತಿ ದಯಾನಂದ ಹಾಗೂ ತಂಡದವರಿಂದ ಜರುಗಿದ ಭಕ್ತಿ ರಸಮಂಜರಿ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

ಮಾಜಿ ಸಚಿವರಾದ ಬಸವರಾಜಪಾಟೀಲ ಅನ್ವರಿ, ಅಲ್ಲಂ ವೀರಭದ್ರಪ್ಪ, ಜಿ.ಪಂ ಮಾಜಿ ಸದಸ್ಯ ಹಾಲಪ್ಪ ಗಾದಿಗನೂರ, ಭೀಮಸಿಂಗ ರಾಠೋಡ, ಪಿ.ಸಿ. ಹಿರೇಮಠ ವೇದಿಕೆಯಲ್ಲಿದ್ದರು.

ಬೆಂಗಳೂರಿನ ಗೀತಾ ಭತ್ತದ ಹಾಗೂ ತಂಡದವರಿAದ ಸಂಗೀತ ಸೇವೆ ಜರುಗಿತು. ಬಿ.ವಾಯ್. ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಶಿವಲಿಂಗಶಾಸ್ತಿç ಸಿದ್ದಾಪುರ ಸ್ವಾಗತಿಸಿದರು. ಬೆಂಗಳೂರಿನ ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ ನಿರೂಪಿಸಿದರು. ಶಿವಶರಣಗೌಡ ಯರಡೋಣಿ ವಂದಿಸಿದರು. ಸಾಮೂಹಿಕ ವಿವಾಹದಲ್ಲಿ 39 ಜೊತೆ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶರಣಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ವ್ಹಿ. ಪಾಟೀಲ ಮಾತನಾಡಿ, ಚನ್ನವೀರ ಶರಣರು ಈ ಯುಗದ ವಿಸ್ಮಯ. ಅವರು ಹೆಚ್ಚು ಹೆಚ್ಚು ನಾಟಕಗಳನ್ನು ಆಡಿಸುತ್ತಿದ್ದ ಉದ್ದೇಶ ಮನೋರಂಜನೆ ಅಲ್ಲ, ಮನೋವಿಕಾಸಕ್ಕಾಗಿ ಆಗಿತ್ತು ಎಂದು ತಿಳಿಸಿ ಶರಣರ ಒಡನಾಟವನ್ನು ಸ್ಮರಿಸಿದರು.

ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಮ.ನಿ.ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ಜನ್ಮ ಹೊತ್ತು ಭೂಮಿಗೆ ಬಂದ ನಾವು ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಕಾರ್ಯ ಮಾಡಬೇಕು. ಸಮಾಜದಲ್ಲಿ ಸರ್ವರನ್ನೂ ಪ್ರೀತಿಸುವ ಸರ್ವರ ಬಗ್ಗೆ ಅಂತಃಕರಣ ಹೊಂದಿರಬೇಕು. ಸಮಾಜವೇ ನನ್ನ ಕುಟುಂಬ ಎಂದು ನಂಬಿ ಬಾಳಿದವರು ಶರಣರು. ಅವರ ನುಡಿಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕೆಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!