ಬೆಂಗಳೂರು:- ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಮಹಿಳಾ ಇನ್ಸ್ಪೆಕ್ಟರ್ವೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗೀತಾ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿಆರ್ ಬಿ ಪೊಲೀಸ್ ಇನ್ಸ್ಪೆಕ್ಟರ್. ಕೊಳೆಗೇರಿ ನಿಗಮದ ವತಿಯಿಂದ ಮನೆ ಪಡೆಯಲು ಲೊಕೇಶ್ ಅರ್ಜಿ ಸಲ್ಲಿಸಿದ್ದರು. ನಕಲಿ ಜಾತಿಪ್ರಮಾಣ ಪತ್ರ ಸಲ್ಲಿಸಿ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿ ಲೊಕೇಶ್ ವಿರುದ್ದ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಡಿಸಿಆರ್ಇ ಇಲಾಖೆಗೆ ದೂರು ನೀಡಿದ್ದರು.
ನೈಜತೆ ಪರಿಶೀಲಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಗೀತಾ, ಅರ್ಜಿಯನ್ನು ವಿಲೇವಾರಿ ಮಾಡಲು ದೂರುದಾರರಿಗೆ 25 ಸಾವಿರ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೊಕೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಂತೆ ಅಧಿಕಾರಿಗಳು ಶುಕ್ರವಾರ ಸಂಜೆ ಕಾರ್ಯಾಚರಣೆ ಕೈಗೊಂಡಿದ್ದು, ದೂರುದಾರನಿಂದ ಫೋನ್ ಪೇ ಮೂಲಕ 10 ಸಾವಿರ ರೂಪಾಯಿ ಪಡೆಯುವಾಗ ಇನ್ಸ್ಪೆಕ್ಟರ್ ಸಿಕ್ಕಿಬಿದ್ದಿದ್ಧಾರೆ. ಲಂಚ ಸ್ವೀಕರಿಸಲು ಮಧ್ಯವರ್ತಿಯಾಗಿದ್ದ ರಿಚರ್ಡ್ ಎಂಬವನನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.