ಹಾಸನ: ಅಧಿಕಾರಿಗಳಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂಬ ತಮ್ಮ ಹೇಳಿಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ‘ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಮಾಡಬಾರದು ಎಂಬ ಅರ್ಥ’ ಎಂದು ಹೇಳಿರುವ ಅವರು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಸಕಲೇಶಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನದ ಸಭೆಯಲ್ಲಿ ಮಾತನಾಡುವ ವೇಳೆ ಸಚಿವರು, ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ವ್ಯಕ್ತಿಯೊಬ್ಬರ ದೂರಿನ ಕುರಿತು ಪ್ರತಿಕ್ರಿಯಿಸಿದ್ದರು. ಈ ವೇಳೆ ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಯಾರಿಗೂ ಲಂಚ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾಗಿ ಸಚಿವರು ತಿಳಿಸಿದ್ದಾರೆ.
ಅಲ್ಲದೆ, ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗೆ ತಾಕೀತು ಮಾಡಿದ್ದೆ. ಕೆಲಸವಾದ ಬಳಿಕ ಅಧಿಕಾರಿಯೊಂದಿಗೆ ಗೌರವಯುತವಾಗಿ ಮಾತನಾಡಿ ತೆರಳುವಂತೆ ಸಂಬಂಧಪಟ್ಟ ವ್ಯಕ್ತಿಗೆ ಹೇಳಿದ್ದೆ ಎಂದು ಶಿವಲಿಂಗೇಗೌಡ ವಿವರಿಸಿದ್ದಾರೆ.
‘ಕೆಲಸ ಮಾಡಿಕೊಟ್ಟ ಅಧಿಕಾರಿಗೆ ಗೌರವ ಏಕೆ ನೀಡಬೇಕು?’ ಎಂದು ಆ ವ್ಯಕ್ತಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ, ‘ನೀವು ಯಾರಿಗೂ ಒಂದು ಪೈಸೆಯನ್ನೂ ಲಂಚ ಕೊಡಬೇಡಿ. ಆದರೆ ಕೆಲಸ ಮಾಡಿಕೊಟ್ಟ ಬಳಿಕ ಅಧಿಕಾರಿಯನ್ನು ಗೌರವಯುತವಾಗಿ ಕಾಣಬೇಕು’ ಎಂಬ ಅರ್ಥದಲ್ಲಿ ತಾವು ಹೇಳಿದ್ದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಎಂದು ತಿಳಿಸಿರುವ ಶಿವಲಿಂಗೇಗೌಡ, ತಾವು ಅಧಿಕಾರಿಗಳಿಗೆ ಲಂಚ ಪಡೆಯಬಾರದು ಎಂದು ಹಲವು ಬಾರಿ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲಸ ಮಾಡಿಕೊಟ್ಟ ಬಳಿಕ ಅಧಿಕಾರಿಗೆ ನಮಸ್ಕರಿಸಿ, ‘ನನ್ನ ಕೆಲಸ ಮಾಡಿಕೊಟ್ಟಿದ್ದೀರಾ’ ಎಂದು ಹೇಳುವ ರೀತಿಯಲ್ಲಿ ಗೌರವ ತೋರಿಸಬೇಕು ಎಂಬ ಉದ್ದೇಶದಿಂದ ಮಾತನಾಡಿದ್ದಾಗಿ ತಿಳಿಸಿದ್ದಾರೆ.
ಈ ವೇಳೆ ಕೆಲಸವಾದ ಬಳಿಕ ಅಧಿಕಾರಿಗೆ ಹೂವಿನ ಹಾರ ಹಾಕಿ ಗೌರವಿಸುವ ಉದಾಹರಣೆಯನ್ನೂ ನೀಡಿದ್ದಾಗಿ ಸಚಿವರು ಹೇಳಿದ್ದಾರೆ. ತಮ್ಮ ಹೇಳಿಕೆಯ ಹಿಂದಿನ ಉದ್ದೇಶವನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ತಮ್ಮ ಹೇಳಿಕೆ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರೊಂದಿಗೂ ಮಾತನಾಡಿರುವುದಾಗಿ ಶಿವಲಿಂಗೇಗೌಡ ತಿಳಿಸಿದ್ದಾರೆ. ‘ನೀವು ಈ ರೀತಿ ಮಾತನಾಡಿರುವುದು ಗೊತ್ತಿಲ್ಲ’ ಎಂದು ಆರ್. ಅಶೋಕ್ ಹೇಳಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
‘ರಾಜ್ಯದ ಜನರು ನನ್ನ ಮಾತನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ದಯಮಾಡಿ ಇದರ ಅರ್ಥವನ್ನು ಬೇರೆ ರೀತಿಯಲ್ಲಿ ಕಲ್ಪಿಸಬೇಡಿ. ಈ ವಿಚಾರವನ್ನು ಇಲ್ಲಿಗೆ ಸಮಾಪ್ತಿಗೊಳಿಸಿ’ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.



