ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ ಮುಂದಿನ 18 ತಿಂಗಳ ಕಾಲ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಹಾಗೂ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬಳ್ಳಾರಿ ರಸ್ತೆಯ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ನಿಂದ ಮೆಖ್ರಿ ಸರ್ಕಲ್ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ ಕಾಮಗಾರಿ ಆರಂಭವಾಗಲಿದ್ದು, ಸುಮಾರು 18 ತಿಂಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗದಂತೆ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಪರ್ಯಾಯ ಮಾರ್ಗಗಳು:
-
ಹೆಬ್ಬಾಳ ಮೂಲಕ ವಿಮಾನ ನಿಲ್ದಾಣದ ಕಡೆಗೆ ತೆರಳುವ ವಾಹನಗಳು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ಸಂಚರಿಸಬೇಕು.
-
ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮತ್ತಿಕೆರೆ ರಸ್ತೆ ಮೂಲಕ ಬಂದು ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಿ ರಿಂಗ್ ರಸ್ತೆಯ ಮೂಲಕ ಸಾಗಬೇಕು.
ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಬರುವವರಿಗೆ:
-
ವಿಮಾನ ನಿಲ್ದಾಣದಿಂದ ಕೇಂದ್ರ ಭಾಗಕ್ಕೆ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ನಾಗವಾರ ಜಂಕ್ಷನ್ ಮೂಲಕ ಬಲಕ್ಕೆ ತಿರುಗಿ ಬಾಂಬೂ ಬಜಾರ್–ಕ್ವೀನ್ಸ್ ರಸ್ತೆ ಮಾರ್ಗ ಬಳಸಬೇಕು.
-
ಮತ್ತೊಂದು ಪರ್ಯಾಯವಾಗಿ ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಡಾ. ರಾಜ್ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.
-
ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳು ಬಿಎಚ್ಇಎಲ್ ಜಂಕ್ಷನ್–ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುಗಿ ಮಾರ್ಗೋಸಾ ರಸ್ತೆಯಲ್ಲಿ ಸಂಚರಿಸಬೇಕು.
ಹೆಬ್ಬಾಳದಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ:
-
ಹೆಬ್ಬಾಳದಿಂದ ನಗರಕ್ಕೆ ಬರುವ ವಾಹನಗಳು ಹೆಬ್ಬಾಳ ಫ್ಲೈಓವರ್ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ತೆರಳಿ ಸಿಬಿಐ ಜಂಕ್ಷನ್ ಮೂಲಕ ಬಳ್ಳಾರಿ ಮುಖ್ಯ ರಸ್ತೆಯನ್ನು ಸಂಪರ್ಕಿಸಬಹುದು.
-
ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಹಾಗೂ ಜಯಮಹಲ್ ಕಡೆಗೆ ತೆರಳುವವರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ, ಆನಂದನಗರ ಕ್ರಾಸ್ ಹಾಗೂ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆ ತಲುಪಬಹುದು.
ಸಂಚಾರ ಮಾರ್ಗ ಬದಲಾವಣೆ ಜಾರಿಯಲ್ಲಿರುವ ಅವಧಿಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಮುಂಚಿತವಾಗಿಯೇ ಪ್ರಯಾಣ ಯೋಜಿಸಿಕೊಳ್ಳುವುದು ಸೂಕ್ತ.









