ಗದಗ: ಸರ್ಕಾರಿ ಕಚೇರಿಗಳಿಂದ ಹಿಡಿದು ಶಾಲೆ, ಆಸ್ಪತ್ರೆ ಹಾಗೂ ವಸತಿ ನಿಲಯಗಳವರೆಗೆ ವಿವಿಧೆಡೆ ಕಂಡುಬಂದಿರುವ ಲೋಪದೋಷಗಳ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೆ ಉತ್ತಮ ಜೀವನ ನಡೆಸಲು ಅಗತ್ಯ ಸವಲತ್ತುಗಳನ್ನು ಸರ್ಕಾರ ನೀಡಿದ್ದರೂ, ಕೆಲವರು ಅತಿಯಾದ ಆಸೆಯಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ದೂರುಗಳು ಬರುತ್ತಿವೆ. ಭ್ರಷ್ಟಾಚಾರ ಸಾಬೀತಾದರೆ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳ ಮೇಲ್ವಿಚಾರಣೆಗೂ ವ್ಯವಸ್ಥೆಯಿದೆ. ಆದರೂ ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ಒಂದೇ ಕೆಲಸಕ್ಕಾಗಿ ಪದೇಪದೇ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಇರಬಾರದು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಜಿಲ್ಲೆಯ ವಿವಿಧ ತಹಶೀಲ್ದಾರ್ ಕಚೇರಿಗಳ ಪರಿಶೀಲನೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅರ್ಜಿ ಸ್ವೀಕಾರದ ನೋಂದಣಿ ಪುಸ್ತಕಗಳ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿವೆ. ರೋಣ ತಹಶೀಲ್ದಾರ್ ಕಚೇರಿಯ ಆಡಿಟ್ ಆಕ್ಷೇಪಣೆಗಳ ವಿಲೇವಾರಿಯಲ್ಲಿನ ವಿಳಂಬ ಹಾಗೂ ತಾಲೂಕಿನ ಹತ್ತು ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿದರು. ಲೋಪಗಳಿಗೆ ಸಮರ್ಪಕ ಉತ್ತರ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕಾಯುಕ್ತ ತಂಡ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ವ್ಯತ್ಯಾಸ, ಸ್ವಚ್ಛತೆಯ ಕೊರತೆ ಹಾಗೂ ಶೌಚಾಲಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಆದರೆ ಹಲವು ಆಸ್ಪತ್ರೆಗಳ ಪರಿಸ್ಥಿತಿ ಕಳವಳಕಾರಿಯಾಗಿದೆ. ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿನ ಸ್ವಚ್ಛತೆಯ ಕೊರತೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದರು.
ಡಂಬಳ ಗ್ರಾಮ ಪಂಚಾಯಿತಿಯಲ್ಲಿ ಮೂರು ವರ್ಷಗಳ ಹಿಂದೆ ಕಸ ಸಂಗ್ರಹಣೆಗೆ ಖರೀದಿಸಿದ ಪ್ಲಾಸ್ಟಿಕ್ ಡಬ್ಬಿಗಳನ್ನು ಗ್ರಾಮಸ್ಥರಿಗೆ ವಿತರಿಸದೆ ಇಟ್ಟುಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಗಿತಗೊಂಡ ಘಟಕಗಳನ್ನು ಪುನರಾರಂಭಿಸಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.
ಗಜೇಂದ್ರಗಡದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ಕೊರತೆ ಇರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದರು. ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಲೋಪಕ್ಕೆ ಸಂಬಂಧಿಸಿದ ಹಿಂದಿನ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವಂತೆ ಸೂಚಿಸಿದರು.
ರೋಣ ತಾಲೂಕಿನ ಎರಡು ಆಹಾರ ಧಾನ್ಯ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದ ಅಕ್ಕಿ, ಜೋಳ ಹಾಗೂ ಗೋಧಿಗೆ ಹುಳು ಹಿಡಿದು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕೊರತೆ, ಭೀಷ್ಮಕೆರೆ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುದು ಹಾಗೂ ಸಮರ್ಪಕ ಕಸ ವಿಲೇವಾರಿ ನಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರು. ಬಾಕಿ ಉಳಿದಿರುವ ಇ-ಸ್ವತ್ತು ಅರ್ಜಿಗಳ ಬಗ್ಗೆಯೂ ಮಾಹಿತಿ ಕೇಳಿದರು.
ಜಿಲ್ಲೆಯ ಕೆರೆಗಳ ರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ಅಧಿಕಾರಿಗಳ ಮೂಲಭೂತ ಕರ್ತವ್ಯವಾಗಿದೆ. ಕೆರೆ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸರ್ಕಾರದ ಯೋಜನೆಗಳು ಹಾಗೂ ಅನುದಾನವನ್ನು ಸಮರ್ಪಕವಾಗಿ, ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಭ್ರಷ್ಟಾಚಾರ ನಡೆಸಿರುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಲೋಕಾಯುಕ್ತ ಅಪರ ಉಪನಿಬಂಧಕ ಗಂಗಾಧರ್, ಆಪ್ತ ಕಾರ್ಯದರ್ಶಿ ಶ್ರೀನಾಥ ಕೆ., ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ ಹೆಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆಯಲ್ಲಿ ಬಯಲಾದ ಪ್ರಮುಖ ಲೋಪಗಳೇನು?
- 219 ಆಡಿಟ್ ಆಕ್ಷೇಪಣೆ: ರೋಣ ತಹಶೀಲ್ದಾರ್ ಕಚೇರಿಯಲ್ಲಿ 20ಕ್ಕೆ ಮಾತ್ರ ಅನುಪಾಲನಾ ವರದಿ.
2. 10 ಗ್ರಾಮಗಳಿಗೆ ಸ್ಮಶಾನವಿಲ್ಲ: ರೋಣ ತಾಲೂಕಿನಲ್ಲಿ ಸ್ಮಶಾನ ಕೊರತೆ.
3. ವಸತಿ ನಿಲಯಗಳಲ್ಲಿ ಲೋಪ: ಹಾಜರಾತಿ, ಸ್ವಚ್ಛತೆ ಮತ್ತು ಶೌಚಾಲಯ ನಿರ್ವಹಣೆಯಲ್ಲಿ ವ್ಯತ್ಯಾಸ.
4. 119 ನೀರಿನ ಘಟಕಗಳು ದುರಸ್ತಿಯಲ್ಲಿ: ಒಟ್ಟು 378 ಘಟಕಗಳ ಪೈಕಿ.
5. ಧಾನ್ಯ ಹಾಳು: ರೋಣ ತಾಲೂಕಿನ ಎರಡು ಉಗ್ರಾಣಗಳಲ್ಲಿ ಅಕ್ಕಿ, ಜೋಳ, ಗೋಧಿಗೆ ಹುಳು
6. 2,425 ಇ-ಸ್ವತ್ತು ಅರ್ಜಿಗಳು ಬಾಕಿ: ವಿಲೇವಾರಿ ವಿಳಂಬ.
7. ಗದಗ-ಬೆಟಗೇರಿ ನಗರಸಭೆ: ಭೀಷ್ಮಕೆರೆ ಸುತ್ತಲಿನ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸಮಸ್ಯೆ.










