ಅಕ್ರಮ ಖರೀದಿ, ಮಾರಾಟಕ್ಕೂ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ | ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ
ಧಾರವಾಡ: ಬಡ ಕುಟುಂಬಗಳ ಹಸಿವು ನೀಗಿಸಲು ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಫಲಾನುಭವಿಗಳ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು. ಅಕ್ರಮವಾಗಿ ಅಕ್ಕಿ ಖರೀದಿ ಮತ್ತು ಮಾರಾಟ ಮಾಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುವ ಜಾಲದ ಮೇಲೆ ಅಧಿಕಾರಿಗಳು ನಿಗಾ ವಹಿಸಬೇಕು. ಬಡವರಿಗಾಗಿ ನೀಡುವ ಅಕ್ಕಿಯ ದುರುಪಯೋಗಕ್ಕೆ ಅವಕಾಶ ನೀಡಬಾರದು. ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ನಿಯಮದಂತೆ ಅಗತ್ಯ ಮಾಹಿತಿಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಈ ಹಿಂದೆ ಇ-ಶ್ರಮ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳ ಕುರಿತು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸೂಚಿಸಿದರು. ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ನಿರುದ್ಯೋಗಿ ಯುವಕರಿಗೆ ಮೂರು ತಿಂಗಳ ತರಬೇತಿ ನೀಡಲು ವೇಳಾಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸುಧೀರ ಎಸ್.ಬೋಳಾರ, ಮುರಗಯ್ಯ ವಿರಕ್ತಮಠ, ರತ್ನಾ ತೇಗೂರಮಠ, ರೇಹಾನ್ ರಝಾ ಐನಾಪೂರಿ, ಬಸಪ್ಪ ಮಹಾಬಲೇಶ್ವರ ಬಾವಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ
- ಯುವನಿಧಿ: 14,155 ಅರ್ಜಿಗಳು ಸ್ವೀಕೃತವಾಗಿದ್ದು, 12,340 ಫಲಾನುಭವಿಗಳಿಗೆ ಡಿಬಿಟಿ ಮೂಲಕ ₹38.33 ಕೋಟಿ ಸಹಾಯಧನ ಜಮೆಯಾಗಿದೆ.
- ಶಕ್ತಿ ಯೋಜನೆ: ಯೋಜನೆ ಆರಂಭವಾದಾಗಿನಿಂದ 46,33,26,824 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸರ್ಕಾರದಿಂದ ₹1,025.10 ಕೋಟಿ ಬಿಡುಗಡೆಯಾಗಿದೆ.
- ಗೃಹಜ್ಯೋತಿ: 5,64,369 ಫಲಾನುಭವಿಗಳಿದ್ದು, ಸರ್ಕಾರದಿಂದ ₹867.27 ಕೋಟಿ ಅನುದಾನ ಬಿಡುಗಡೆಯಾಗಿದೆ.
- ಗೃಹಲಕ್ಷ್ಮಿ: 3,77,760 ಫಲಾನುಭವಿಗಳಿಗೆ ಒಟ್ಟು ₹2,421.29 ಕೋಟಿ ಬಿಡುಗಡೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ 117 ಫಲಾನುಭವಿಗಳು ಮೃತಪಟ್ಟಿದ್ದಾರೆ.
- ಅನ್ನಭಾಗ್ಯ: ಜಿಲ್ಲೆಯಲ್ಲಿ 3,75,996 ಫಲಾನುಭವಿಗಳಿದ್ದಾರೆ.
“ಬಡವರಿಗಾಗಿ ಸರ್ಕಾರ ನೀಡುವ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹ ಫಲಾನುಭವಿಗಳ ಪಡಿತರ ಚೀಟಿ ರದ್ದುಗೊಳಿಸಲಾಗುವುದು. ಅಕ್ರಮ ಖರೀದಿ ಮತ್ತು ಮಾರಾಟ ಮಾಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.”
— ಎಸ್.ಆರ್.ಪಾಟೀಲ, ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ










