ಬೆಂಗಳೂರು:– ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಎ.ಟಿ.ರಘು ವಿಧಿವಶರಾಗಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆಚ್ಚಿನ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದ ನಿರ್ದೇಶಕ ಎ.ಟಿ.ರಘು ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಹಿಟ್ ಸಿನಿಮಾ ಮಂಡ್ಯದ ಗಂಡು ಸೇರಿದಂತೆ 55ಕ್ಕೂ ಹೆಚ್ಚು ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶಿಸಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಒಬ್ಬರಿಗೇ ರಘು ಅವರು 27 ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆರ್ಥಿಕ ಸಮಸ್ಯೆಯಿಂದಲೂ ಒದ್ದಾಡುತ್ತಿದ್ದ ಅವರಿಗೆ ಜೀವನ ನಡೆಸುವುದು ಕೂಡ ಕಷ್ಟವಾಗಿತ್ತು. ಇದಲ್ಲದೆ ಅವರಿಗೆ ಕಿಡ್ನಿ ಫೇಲ್ಯೂರ್, ಹೃದಯ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್ ಕೂಡ ಆಗಿತ್ತು. ಕಳೆದ ಹಲವು ವರ್ಷಗಳಿಂದ ಅವರು ವೀಲ್ಚೇರ್ನಲ್ಲೇ ಇದ್ದರು.
ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಗುರುವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಆರ್ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಬ್ಬಾಳದ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.