ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಬೇಲ್ ಮೇಲೆ ಹೊರ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಮತ್ತೆ ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರಿಂದ ಅನೇಕ ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಮತ್ತೆ ಚುರುಕು ಪಡೆದುಕೊಂಡಿದೆ.
ದರ್ಶನ್ ಅವರು, ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಈಗ ಮತ್ತೊಂದು ಹಂತದ ಶೂಟಿಂಗ್ ಬಗ್ಗೆ ‘ದಿ ಡೆವಿಲ್’ ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.
ದಿ ಡೆವಿಲ್’ ಸಿನಿಮಾದ ಶೂಟಿಂಗ್ ಬಿರುಸಿನಿಂದ ಸಾಗುತ್ತಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಶ್ರೀ ಜೈ ಮಾತಾ ಕಂಬೈನ್ಸ್’ ಮೂಲಕ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಪ್ರಕಾಶ್ ವೀರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ, ಮಾತಿನ ಭಾಗದ ಶೂಟಿಂಗ್ ನಡೆಯುತ್ತಿದೆ. ದರ್ಶನ್ ಜೊತೆ ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿದಂತೆ ಅನೇಕ ಕಲಾವಿದರು ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ.
ದರ್ಶನ್ ಅವರಿಗೆ ಬೆನ್ನು ನೋವು ಇದೆ. ಹಾಗಾಗಿ ಮೊದಲಿನಂತೆ ಆ್ಯಕ್ಷನ್ ಸನ್ನಿವೇಶಗಳ ಶೂಟಿಂಗ್ ಮಾಡುವುದು ಕಷ್ಟ. ಆ ಕಾರಣದಿಂದ ಸದ್ಯಕ್ಕೆ ಮಾತಿನ ಭಾಗದ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗುತ್ತಿದೆ.
ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಚನಾ ರೈ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ತುಳಸಿ, ಮಹೇಶ್ ಮಂಜ್ರೇಕರ್, ಶ್ರೀನಿವಾಸ್ ಪ್ರಭು , ಶೋಭರಾಜ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸುಧಾಕರ್ ಎಸ್. ರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನ, ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.