ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಶೀಘ್ರವೇ ಸಭೆ ನಡೆಸುವುದಾಗಿ ಕೇಂದ್ರ ಸಚಿವರ ಭರವಸೆ: DCM ಡಿಕೆ ಶಿವಕುಮಾರ್!

0
Spread the love

ದೆಹಲಿ:- ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಶೀಘ್ರವೇ ರಾಜ್ಯಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸುವುದಾಗಿ ಕೇಂದ್ರ ಜಲಶಕ್ತಿ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

ನವದೆಹಲಿಯ ಕರ್ನಾಟಕ ಭವನ-1 ʻಕಾವೇರಿʼಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು. ಆಲಮಟ್ಟಿ ಅಣೆಕಟ್ಟು ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಕೇಂದ್ರ ಜಲಶಕ್ತಿ ಸಚಿವರಾದ ಸಿ‌.ಆರ್ ಪಾಟೀಲ್ ಅವರನ್ನು ರಾಜ್ಯಖಾತೆ ಸಚಿವರಾದ ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ ಎಂದರು.


Spread the love

LEAVE A REPLY

Please enter your comment!
Please enter your name here