ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಅಸ್ಥಿರತೆಯನ್ನು ಬಯಲಿಗೆಳೆದಿದೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಒಳಗಿನ ಅಸಮಾಧಾನ ಮತ್ತು ಗೊಂದಲಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ಪ್ರಕ್ರಿಯೆಯನ್ನು ಗಮನಿಸಿದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಅಥವಾ ನಿಯಂತ್ರಣ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಕಾರ್ಯವೈಖರಿಯಲ್ಲಿ ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಗೋಚರಿಸುತ್ತಿವೆ ಎಂದು ಅವರು ಆರೋಪಿಸಿದರು.
ಇದಲ್ಲದೆ, ಮುಖ್ಯಮಂತ್ರಿ ಪರವಾಗಿ ಗುರುತಿಸಿಕೊಂಡಿರುವ ಹಲವು ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯದಿರುವುದನ್ನು ಉಲ್ಲೇಖಿಸಿದ ಶರವಣ, ಸರ್ಕಾರವು ಹೈಕಮಾಂಡ್ ಹಾಗೂ ಇತರ ನಾಯಕರ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಹೇಳಿದರು.
ರಾಜ್ಯದ ಆಡಳಿತದ ಕುರಿತು ಜನರಲ್ಲಿ ಮೂಡಿದ್ದ ನಿರೀಕ್ಷೆಗಳು ಕ್ರಮೇಣ ಕುಸಿಯುತ್ತಿದ್ದು, ರಾಮಲಿಂಗಾ ರೆಡ್ಡಿ ಮಾತ್ರವಲ್ಲದೆ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆಗಳು ಆಂತರಿಕ ಅರಾಜಕತೆ ಮತ್ತು ಸಮನ್ವಯದ ಕೊರತೆಯನ್ನು ಪ್ರತಿಬಿಂಬಿಸುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರ ಆಂತರಿಕ ಭಿನ್ನಾಭಿಪ್ರಾಯಗಳ ಒತ್ತಡಕ್ಕೆ ಸಿಲುಕಿ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಟಿ.ಎ. ಶರವಣ ಅಭಿಪ್ರಾಯಪಟ್ಟಿದ್ದಾರೆ.



