ವಿಷ ಸೇವಿಸಿ ಯುವತಿ ಸಾವು: ಶವ ಸುಟ್ಟುಹಾಕಿ ಪ್ರಕರಣ ಮುಚ್ಚಿ ಹಾಕಲೆತ್ನಿಸಿದ 7 ಜನರ ವಿರುದ್ಧ ಕೇಸ್

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ತಮ್ಮ ಮಗಳು ವಿಷಸೇವಿಸಿ ಮೃತಪಟ್ಟ ವಿಚಾರವನ್ನು ಬಹಿರಂಗಪಡಿಸದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಶವವನ್ನು ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ೭ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಗ್ರಾಮದ ಪೂಜಾ (೧೮) ಮೇ ೧೦ರಂದು ರಾತ್ರಿ ೧೦.೩೦ ಗಂಟೆಗೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದದ್ದಳು. ಆಕೆಯನ್ನು ತಂದೆ ಸುರೇಶ್, ಚಿಕ್ಕಪ್ಪರಾದ ಅಂಜಿನಪ್ಪ, ನಾಗರಾಜ, ಸಂಬಂಧಿಗಳಾದ ಭೀಮಪ್ಪ, ಹನುಮಂತ, ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾಳೆ.

ಅನಂತರ ಆರೋಪಿತರು ಈ ವಿಷಯವನ್ನು ರಾತ್ರಿ ೧೧.೩೦ ಗಂಟೆ ಸಮಯದಲ್ಲಿ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಪೂಜಾಳ ಮೃತ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ತಿಳಿಸದೆ, ತಮ್ಮ ಗ್ರಾಮದ ಕರೆಯ ಸಮೀಪ ಸ್ಮಶಾನದ ಬಳಿ ಸುಟ್ಟು ಹಾಕಿದ್ದಾರೆ. ಈ ಮಾಹಿತಿ ಆಧರಿಸಿ ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸೊನ್ನದ ರಾಜೇಂದ್ರ ಅವರು ದೂರು ಸಲ್ಲಿಸಿದ್ದಾರೆ. ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಹಲುವಾಗಲು ಸಬ್ ಇನ್‌ಸ್ಪೆಕ್ಟರ್ ಎಚ್.ಎಸ್.ಪ್ರಶಾಂತ ಅವರು ತನಿಖೆ ಕೈಗೊಂಡಿದ್ದಾರೆ.

ಸಾವಿನ ಹಿಂದೆ ಪ್ರೇಮಕಥೆ?

ಮೃತ ಯುವತಿ ಮತ್ತು ಅನ್ಯ ಕೋಮಿನ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಮದುವೆಯಾಗಲು ಮನೆಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ಇವರು ತಂಗಿದ್ದ ಸ್ಥಳವನ್ನು ಹುಡುಗಿಯ ಪಾಲಕರು ಪತ್ತೆ ಹಚ್ಚಿದ್ದಾರೆ. ಆಗ ಹುಡುಗ ಪ್ರಾಣ ಭಯದಿಂದ ತಲೆಮರೆಸಿಕೊಂಡಿದ್ದ. ಹುಡುಗಿಯ ಪಾಲಕರು, ಸಂಬಂಧಿಕರು ಆಕೆಯನ್ನು ಸ್ವ-ಗ್ರಾಮಕ್ಕೆ ಕರೆತಂದು ಬಲವಂತವಾಗಿ ವಿಷ ಉಣಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಗ್ರಾಮದಲ್ಲಿ ಹರಡಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ