ಚಿಕ್ಕಬಳ್ಳಾಪುರ:- ಕಳೆದ ಸಾಕಷ್ಟು ದಿನಗಳಿಂದ ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ಇಂದು ಸಚಿವ ಕೆ. ಹೆಚ್ ಮುನಿಯಪ್ಪ ಮನೆಗೆ ಮುತ್ತಿಗೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೂಡಲೇ ರೈತನೋರ್ವ ವಿಷ ಸೇವಿಸಿರುವ ಘಟನೆ ಜರುಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು, ಸರ್ಕಾರದ ಕ್ರಮ ಖಂಡಿಸಿ ಈ ಭಾಗದ ರೈತರು ತಮ್ಮ ಜಮೀನು ಕೊಡೋದಿಲ್ಲ ಅಂತ ನಿರಂತರ 4 ವರ್ಷಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದೇವನಹಳ್ಳಿ ಶಾಸಕ ಕೆ.ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ರು. ಅಂತೆಯೇ ಎರಡು ಬಸ್‌ಗಳ ಮೂಲಕ ಬೆಂಗಳೂರಿಗೆ ಹೊರಟಿದ್ದ ರೈತರ ಬಸ್‍ನ್ನ ಪೊಲೀಸರು ತಡೆಯೊಡ್ಡಿದ್ದರು. ಇದ್ರಿಂದ ರೈತರು ಹಾಗೂ ಪೊಲೀಸರು ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ.
ಇದಾದ ನಂತರ ಧರಣಿ ನಿರತ ರೈತರು ನಮಗೆ ಸಾಯೋದಕ್ಕಾದರೂ ಬಿಡಿ ಅಂತ ಊಟದಲ್ಲಿ ಕ್ರಿಮಿನಾಶಕ ಬೆರೆಸಲು ಮುಂದಾಗಿದ್ದು, ಈ ವೇಳೆ ಕ್ರಿಮಿನಾಶಕ ಬಾಟಲಿಯನ್ನ ಪೊಲೀಸರು ಕಸಿದುಕೊಳ್ಳುವ ಪ್ರಯತ್ನ ಮಾಡಿ ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ರೈತ ವೆಂಕಟೇಶ್ ಎಂಬಾತ ಕ್ರಿಮಿನಾಶಕ ಸೇವಿಸಿ ಆಸ್ವಸ್ಥಗೊಂಡಿದ್ದು, ಪೊಲೀಸರು ಅಸ್ವಸ್ಥ ರೈತನನ್ನ ದೇವನಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.