ಬಳ್ಳಾರಿ:– ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಾರ್ಖಾನೆಗಳ ತ್ಯಾಜ್ಯ, ರಸಗೊಬ್ಬರ ಸೇರಿ ಇತರೆ ತ್ಯಾಜ್ಯಯುಕ್ತ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಜನ-ಜಲಚರಗಳಿಗೂ ಸಂಕಟ ಅನುಭವಿಸುವಂತಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲೀನವಾಗಿ, ಹಸಿರು ಬಣ್ಣಕ್ಕೆ ತಿರುಗಿದೆ. ಇದೇ ಹಸಿರು ಬಣ್ಣಕ್ಕೆ ತಿರುಗಿದ, ಕುಡಿಯಲು ಯೋಗ್ಯವಲ್ಲದ ನೀರೇ ಮೂರು ರಾಜ್ಯಗಳ 8 ಜಿಲ್ಲೆಗಳ ಜನರಿಗೆ ಅನಿವಾರ್ಯ ಎನ್ನುವಂತಾಗಿದೆ. ಈಗಾಗಲೇ ಹಲವು ಬಾರಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಜಲಾಶಯದ ನೀರು ಮಲೀನಗೊಂಡಿದ್ದರಿಂದ ಬೃಹತ್ ಗಾತ್ರದ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿವೆ. ಹೀಗೇ ಸತ್ತು ಬಿದ್ದ ಮೀನುಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ತೇಲಿ ಬರುತ್ತಿವೆ.
ಇನ್ನೂ ಜಲಾನಯನ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲ ಒಂದು ರೀತಿಯ ಕಾರ್ಖಾನೆಗಳು ನಿರ್ಮಾಣವಾಗುತ್ತಿವೆ. ಕಾರ್ಖಾನೆಗಳಿಂದ ಬರುವ ತ್ಯಾಜ್ಯ ಹಾಗೂ ಹೊಲ-ಗದ್ದೆಗಳಿಗೆ ಬಳಸುವ ರಸಗೊಬ್ಬರ ಸೇರಿ ಇತರೆ ತ್ಯಾಜ್ಯಯುಕ್ತ ಅಂಶಗಳು ಮಳೆ ನೀರಿನಲ್ಲಿಅಪಾರ ಪ್ರಮಾಣದ ತ್ಯಾಜ್ಯ ಹರಿದು ಜಲಾಶಯದ ಮಡಿಲು ಸೇರುತ್ತಿದೆ. ಇದರಿಂದ ಜಲಾಶಯ ವಿಷಯುಕ್ತವಾಗಿ ಬದಲಾವಣೆಗೂ ಕಾರಣ ಎಂಬುದು ತಜ್ಞರ ಎಚ್ಚರಿಕೆಯಾಗಿದೆ.