ನೆಲಮಂಗಲ:- ಆಟೋಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಮೂವರು ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಬಳಿ ಜರುಗಿದೆ.
ಚಾಲಕ ಶ್ರೀನಿವಾಸ್, ಪುಟ್ಟಮ್ಮ, 11 ವರ್ಷದ ವರ್ಷಿಣಿ ಮೃತರು. ಹಾಸನ – ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಶ್ರೀನಿವಾಸ್ ಹಾಗೂ ಪುಟ್ಟಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 13 ವರ್ಷದ ವರ್ಷಿಣಿ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಲೇಖನ ಎಂಬ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ನಾಗರತ್ನಮ್ಮ ಹಾಗೂ ವೆಂಕಟೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಮಾರ್ಗದಲ್ಲಿ ಹೊರನಾಡಿಗೆ ಸಂಚರಿಸುತ್ತಿದ್ದ ಬಸ್ ನೆಲಮಂಗಲ ಬಳಿ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು.



