ವಿಜಯಸಾಕ್ಷಿ ಸುದ್ದಿ, ಮೈಸೂರು
ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಸಂಸ್ಕರಣೆಗೊಳಿಸದೆ ಪಿಪಿಇ ಕಿಟ್ ಗಳನ್ನು ಕಾಲುವೆಯಲ್ಲಿ ಎಸೆಯುತ್ತಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದು ಆಸ್ಪತ್ರೆ ಸಿಬ್ಬಂದಿಯ ಪಿಪಿಇ ಕಿಟ್ ಅವಾಂತರ. ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಈ ಪಿಪಿಇ ಕಿಟ್ ಗಳನ್ನು ಸಂಸ್ಕರಿಸಬೇಕು. ಆದರೆ, ಕಾರ್ಯ ಇಲ್ಲಿ ನಡೆಯುತ್ತಿಲ್ಲ. ಹೀಗಾಗಿ ಇವು ಸಾರ್ವಜನಿಕರು ಬಳಸುವ ನೀರಿನ ನಾಲೆಯಲ್ಲಿ ತೇಲಾಡುತ್ತಿವೆ.
ಇಲ್ಲಿಯ ಕೆ.ಆರ್. ಮಿಲ್ ಹತ್ತಿರದ ಕಾಲುವೆ ಬಳಿ 20ಕ್ಕೂ ಹೆಚ್ಚು ಪಿಪಿಇ ಕಿಟ್ ಪತ್ತೆಯಾಗಿವೆ. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ಆತಂಕದೊಂದಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಕೊವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಕೆಲವು ಸ್ಮಶಾನಗಳನ್ನ ಆಯ್ಕೆ ಮಾಡಿದೆ. ಈ ಕಾಲುವೆ ಹತ್ತಿರ ಕ್ರೈಸ್ತ ಧರ್ಮದ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈ ಜಾಗ ಪುಟ್ಟದಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಕ್ರೈಸ್ತರು ಸಾವನ್ನಪ್ಪಿದರೆ ಅವರನ್ನು ಇಲ್ಲಿಯೇ ತಂದು ಸಂಸ್ಕಾರ ಮಾಡಲಾಗುತ್ತದೆ.
ಬೆಲವತ್ತ ಗ್ರಾಮದಲ್ಲಿಯೇ ಸಾಕಷ್ಟು ಜನ ಕ್ರೈಸ್ತರಿದ್ದಾರೆ. ಈ ಸ್ಮಶಾನವನ್ನು ನಮ್ಮ ಗ್ರಾಮದ ಸ್ಮಶಾನಕ್ಕೆ ಮೀಸಲಿಡಬೇಕು. ಕೂಡಲೇ ಸರ್ಕಾರ ನಿರ್ಧಾರ ಕೈ ಬಿಡಬೇಕು. ಕೊವಿಡ್ ನಿಂದ ಮೃತಪಟ್ಟವರನ್ನು ಇಲ್ಲಿಗೆ ತಂದು ಶವಸಂಸ್ಕಾರ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಮಕ್ಕಳು, ಜಾನುವಾರುಗಳು ಈ ನೀರಿನಲ್ಲಿ ಆಟ ಆಡುತ್ತಿದ್ದಾರೆ. ಅಂತಹ ನೀರಿಗೆ ಪಿಪಿಇ ಕಿಟ್ ಗಳನ್ನು ಬಿಸಾಡಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತಿದ್ದ ಪಿಪಿಇ ಕಿಟ್ ತೆರವುಗೊಳಿಸಿದ್ದಾರೆ.