ಸಂಗೀತ ಕಲೆ ಸಂವರ್ಧನೆಗೊಳ್ಳಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತ ಸಂವರ್ಧನೆ ಹಾಗೂ ಸಂಗೀತ ಕಲಾವಿದರನ್ನು ಗೌರವಿಸುವ ಕಾರ್ಯ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಗದುಗಿನ ವಿದೂಷಿ ಕೋಟಾ ಇಂದಿರಾ ವ್ಹಿ.ಶೆಣೈ ಕಲಾ ವೇದಿಕೆ ತನ್ನದೇ ಆದ ಇತಿಮಿತಿಯಲ್ಲಿ ಇಂತಹ ಕಾರ್ಯ ಮಾಡುತ್ತಿದೆ ಎಂದು ವೇದಿಕೆಯ ಅಧ್ಯಕ್ಷೆ, ಗದಗ ಐಎಂಎ ಮಾಜಿ ಅಧ್ಯಕ್ಷೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.

Advertisement

ಅವರು ರವಿವಾರ ಗದಗ ಐಎಂಎ ಸಭಾಂಗಣದಲ್ಲಿ ವಿದೂಷಿ ಕೋಟಾ ಇಂದಿರಾ ವ್ಹಿ.ಶೆಣೈ ಕಲಾ ವೇದಿಕೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 15ನೇ ವರ್ಷದ ಸ್ವರ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಯಿಗಿಂತ ಮಿಗಿಲಾದದ್ದು ಇಲ್ಲ. ಸರ್ವ ಶ್ರೇಷ್ಠವಾದ ತಾಯಿಯ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ನಮ್ಮ ಯುವ ಜನಾಂಗ ತಾಯಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು, ತಾಯಿಯ ಸೇವೆ ಮಾಡಿ ತಾಯಿಯ ಋಣ ತಿರಿಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಗದಗ ಐಎಂಎ ಮಾಜಿ ಅಧ್ಯಕ್ಷರಾದ ಡಾ. ಪ್ಯಾರಅಲಿ ನೂರಾನಿ, ಐಎಂಎ ಕಾರ್ಯದರ್ಶಿ ಡಾ. ತುಕಾರಾಮ ಸೂರಿ ಆಗಮಿಸಿದ್ದರು. ವೇದಿಕೆಯ ಸಂಚಾಲಕ ಡಾ. ಉದಯ ಕುಲಕರ್ಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಮಾಜಮುಖಿ ಕಾರ್ಯ ಮಾಡಿದ ಶ್ರೀಕಾಂತ ಜೋಷಿ, ವಿನಾಯಕ ಕಾಮತ್, ವೆಂಕಟೇಶ ರಾಯಭಟ್‌ನವರ, ಶ್ರೀಕಾಂತ ಪಾಠಕ, ದೀಪ್ತಿ ಪಾಠಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ವರಾಲಯ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ಮಂಜುಳಾ ಇದ್ಲಿ, ತನ್ವಿ ಮೋನೆ, ಐಶ್ವರ್ಯ ಮ್ಯಾಗೇರಿ, ಬಿಂದು ಅವರ ದಾಸವಾಣಿ ಸಂಗೀತಕ್ಕೆ ಪಂ. ಗುರುನಾಥ ಸುತಾರ್, ಶ್ರೀನಿವಾಸ ಮ್ಯಾಗೇರಿ, ಶಿವಾನಂದ ಬಾವಿಕಟ್ಟಿ ಸಾಥ್ ನೀಡಿದರು.

ಸರಸ್ವತಿ ಸಂಗೀತ ಸಾಧನ ಮ್ಯೂಸಿಕ್ ಶಾಲೆಯ ಅನಘಾ ಕುಲಕರ್ಣಿ, ಶುಭಾಂಗಿ, ಐಶ್ವರ್ಯ ಮ್ಯಾಗೇರಿ ಅವರ ಸಂಗೀತಕ್ಕೆ ದೀಪ್ತಿ ಪಾಠಕ್, ಮಲ್ಲಿಕಾರ್ಜುನ ಕೊಡಗಾನೂರ ಸಾಥ್ ನೀಡಿದರು. ವೇದಿಕೆಯ ಸಂಚಾಲಕ ಡಾ.ಉದಯ ಕುಲಕರ್ಣಿ ಸಂತ ತುಕಾರಾಮ ಅವರ ತೀರ್ಥ ವಿಠ್ಠಲ ಅಭಂಗವನ್ನು ಪ್ರಸ್ತುತಪಡಿಸಿದರು. ಕೊನೆಗೆ ಪ್ರಸಾದ ಸುತಾರ್ ಅವರಿಂದ ದಾಸವಾಣಿ ಮತ್ತು ಮಂಗಲ ಸಂಗೀತ ಜರುಗಿತು.

ತನ್ವಿ ಮೋನೆ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ನಾಗರಾಜ ಹೊಸಮನಿ, ಕು.ಶಿ. ಜಯದೇವ ಭಟ್, ಗಂಗಾಧರ ಹಿರೇಮಠ, ಸಿದ್ಧರಾಮ ಪಟ್ಟೇದ ಮುಂತಾದವರು ಪಾಲ್ಗೊಂಡಿದ್ದರು.

ರಾಜಾಶ್ರಯದಲ್ಲಿ ಪೋಷಣೆಗೊಂಡು ಬಂದಿರುವ ಸಂಗೀತ ಕಲೆಯನ್ನು ಸರಕಾರ, ಸಂಘ-ಸಂಸ್ಥೆಗಳು ಪೋಷಿಸಬೇಕು. ತನ್ಮೂಲಕ ಸಂಗೀತ ಹಾಗೂ ಕಲಾವಿದರು ಉಳಿಯಬೇಕು. ಈ ಮಾಲಿಕೆಯಲ್ಲಿ ನನ್ನ ತಾಯಿ ಕೋಟಾ ಇಂದಿರಾ ವಿಶ್ವನಾಥ ಶೆಣೈ ಸ್ಮರಣಾರ್ಥ ನಮ್ಮ ವೇದಿಕೆಯು ಕಲಾವಿದರನ್ನು ಹಾಗೂ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ಪರಂಪರೆ ಮುನ್ನಡೆಯಲಿದೆ ಎಂದು ಡಾ. ರಾಧಿಕಾ ಕುಲಕರ್ಣಿ ಹೇಳಿದರು.


Spread the love

LEAVE A REPLY

Please enter your comment!
Please enter your name here