ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: 2025-26ನೇ ಸಾಲಿಗೆ ಅಲ್ಪ ಸಂಖ್ಯಾತ ನಿರ್ದೇಶನಾಲಯ ವ್ಯಾಪ್ತಿಯ ಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಆಯ್ಕೆ ಮಾಡಲು ಅರ್ಜಿ ಕರೆದಿರುವ ಅನಗತ್ಯ ಕ್ರಮ ಖಂಡನೀಯ ಎಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರ ಕೂಡಲೇ ಈ ಅಪಾಯಕಾರಿ ಪ್ರಕ್ರಿಯೆಯನ್ನು ರದ್ದಪಡಿಸಬೇಕು. ಅಲ್ಪಸಂಖ್ಯಾತ ಇಲಾಖೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೂ ಸಾಮಾನ್ಯ ಪರೀಕ್ಷೆ (ಸಿಇಟಿ)ಯೊಂದಿಗೆ ಆಯ್ಕೆ ಮಾಡಲು ಹೊರಟಿದೆ. ಈ ಪ್ರಕ್ರಿಯೆಯ ಮೂಲಕ ಶಾಲೆಗಳಿಗೆ ಪೂರ್ಣ ಪ್ರಮಾಣದ ಖಾಯಂ ನೇಮಕಾತಿಯನ್ನು ಸಂಪೂರ್ಣವಾಗಿ ಕೈಬಿಡುವ ದುಷ್ಟ ಹಾಗೂ ಅಪಾಯಕಾರಿ ಹುನ್ನಾರವಿದ್ದಂತಿದೆ ಎಂದಿದ್ದಾರೆ.
ಈಗಾಗಲೇ ಅತಿಥಿ ಶಿಕ್ಷಕರಾಗಿ ಸಲ್ಲಿಸಿರುವವರ ಸೇವೆಯನ್ನು ಪರಿಗಣಿಸದೇ ಅವರಿಗೆ ವಂಚಿಸಲಾಗುತ್ತಿದೆ. ಅನಗತ್ಯವಾಗಿ ಸಿಇಟಿ ಪ್ರಕ್ರಿಯೆ ನಡೆಸುತ್ತಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಶಿಕ್ಷಕರ ನೇಮಕಾತಿಯ ನಿಯಮಗಳನ್ನು ಸ್ವತಃ ಸರಕಾರವೇ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಗಾಗಿ, ಕೂಡಲೇ ಈ ಆದೇಶವನ್ನು ರದ್ದಪಡಿಸಿ, ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಖಾಯಂ ನೇರ ನೇಮಕಾತಿಗೆ ಮುಂದಾಗಬೇಕು. ಈ ನೇಮಕಾತಿಗೆ ಈಗಾಗಲೇ ಹಲವಾರು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.