ನೆಲಮಂಗಲ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರಿಗೆ ವಿಚಿತ್ರ ಅನುಭವ ನೀಡಿದ ಘಟನೆ ನಡೆದಿದೆ.
ಶಿವಗಂಗೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ಬರ ಕೈಯಲ್ಲಿದ್ದ ಮೊಬೈಲ್ ಅನ್ನು ಏಕಾಏಕಿ ಕಸಿದುಕೊಂಡ ಮಂಗ, ನೇರವಾಗಿ ದೇವಾಲಯದ ಗೋಪುರದ ಶಿಖರ ಏರಿ ಕುಳಿತುಕೊಂಡಿದೆ.
ಮೊಬೈಲ್ ವಾಪಸ್ ಪಡೆಯಲು ಯುವತಿ ಹಾಗೂ ಆಕೆಯ ಜೊತೆಗಿದ್ದವರು ಸಾಕಷ್ಟು ಪ್ರಯತ್ನಪಟ್ಟರೂ ಮಂಗ ಕೆಳಗೆ ಬರಲಿಲ್ಲ. ಸುಮಾರು ಒಂದು ಗಂಟೆ ಕಾಲ ಮೊಬೈಲ್ ಹಿಡಿದುಕೊಂಡೇ ಪ್ರವಾಸಿಗರನ್ನು ಸತಾಯಿಸಿದ ಕೋತಿ, ಕೊನೆಗೆ ಮೊಬೈಲ್ ಅನ್ನು ಕೆಳಗೆ ಎಸೆದಿದೆ.
ಮೊಬೈಲ್ ಕೈಗೆ ಸಿಕ್ಕಿದ್ದರಿಂದ ಯುವತಿ ನಿಟ್ಟುಸಿರು ಬಿಟ್ಟರೂ, ಫೋನ್ಗೆ ಸಣ್ಣಪುಟ್ಟ ಹಾನಿಯಾಗಿರುವುದು ಕಂಡು ಕೊಂಚ ಬೇಸರಗೊಂಡಿದ್ದಾರೆ.
ಶಿವಗಂಗೆ ಬೆಟ್ಟದಲ್ಲಿ ಮಂಗಗಳ ಕಾಟ ಸಾಮಾನ್ಯವಾಗಿದ್ದು, ಪ್ರವಾಸಿಗರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಸೂಚಿಸಿದ್ದಾರೆ.



