ಕಲಬುರಗಿ: ನಗರದ ಹಳೆ ಆರ್‌ಟಿಓ ರಸ್ತೆಯ ವೈನ್ ಶಾಪ್‌ವೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಕಲಬುರಗಿಯ ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಎಂದು ಗುರುತಿಸಲಾಗಿದೆ. ಟೀ ಪಾಯಿಂಟ್‌ಗಳು ಹಾಗೂ ಸಭೆ-ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರವಿ, ನಿನ್ನೆ ರಾತ್ರಿ ಮದ್ಯ ಖರೀದಿಸಲು ವೈನ್ ಶಾಪ್‌ಗೆ ಬಂದಿದ್ದರು.
ಮದ್ಯ ಖರೀದಿಸಿ ಹೊರಬಂದು ವಾಹನದ ಮೇಲೆ ಕುಳಿತುಕೊಳ್ಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರವಿ ಗುತ್ತೆದಾರ್ ವಿರುದ್ಧ 2021ರಲ್ಲಿ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



