ಚೆನ್ನೈ: ತಮಿಳುನಾಡು ಸರ್ಕಾರ ಬರೋಬ್ಬರಿ 13 ವರ್ಷಗಳ ಬಳಿಕ ರಾಜ್ಯಾದ್ಯಂತ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿದೆ.
ಹೊಸ ದರದ ಪ್ರಕಾರ, ಮೊದಲ 1.8 ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ₹50 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ₹25 ಪಾವತಿಸಬೇಕಾಗುತ್ತದೆ.
1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ದೀರ್ಘಕಾಲದ ಬಳಿಕ ದರ ಪರಿಷ್ಕರಣೆಯಾಗಿರುವುದರಿಂದ ಆಟೋ ಚಾಲಕರಿಗೆ ಅನುಕೂಲವಾಗಲಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಲಾಗಿದೆ.
ರಾತ್ರಿ ಪ್ರಯಾಣಕ್ಕೆ ಹೆಚ್ಚುವರಿ ದರ:
ಪರಿಷ್ಕೃತ ದರಗಳ ಪ್ರಕಾರ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರಯಾಣಿಸುವವರಿಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ಪ್ರಯಾಣಿಕರು ಕಾಯುವ ಪ್ರತಿ ನಿಮಿಷಕ್ಕೆ ₹1 ವೇಟಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ.
ಘಾಟ್ ಪ್ರದೇಶದ ಪ್ರಯಾಣಕ್ಕೂ ಹೊಸ ದರ:
ಘಾಟ್ ಪ್ರದೇಶಗಳಲ್ಲಿ ಸಂಚರಿಸುವ ಆಟೋಗಳಿಗೆ ಕನಿಷ್ಠ ದರವನ್ನು ಸಾಮಾನ್ಯ ಕನಿಷ್ಠ ದರದ 1.2 ಪಟ್ಟು ನಿಗದಿಪಡಿಸಲಾಗಿದೆ. ಇದರಂತೆ ಆರಂಭಿಕ ದರ ₹60 ಆಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ₹30 ನಿಗದಿಪಡಿಸಿರುವುದಾಗಿ ವರದಿಯಾಗಿದೆ.
ಪ್ರಯಾಣಿಕರಿಗೆ ಹೊರೆಯಾಗಲಿದೆಯೇ?
13 ವರ್ಷಗಳ ಬಳಿಕ ಆಟೋ ದರದಲ್ಲಿ ಬದಲಾವಣೆ ಮಾಡಿರುವುದರಿಂದ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಇಂಧನ ಮತ್ತು ನಿರ್ವಹಣಾ ವೆಚ್ಚ ಸೇರಿದಂತೆ ಚಾಲಕರು ಎದುರಿಸುತ್ತಿರುವ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹೊಸ ದರ ಜಾರಿಯಿಂದ ಆಟೋ ಚಾಲಕರಿಗೆ ಆರ್ಥಿಕವಾಗಿ ನೆರವಾಗುವ ನಿರೀಕ್ಷೆಯಿದ್ದರೂ, ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ.









