ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ.
ರಾಜ್ಯ ಸರ್ಕಾರದ 33 ಇಲಾಖೆಗಳಲ್ಲಿ ಖಾಲಿ ಇರುವ 5,431 ಪ್ರಥಮ ದರ್ಜೆ ಸಹಾಯಕರು (FDA/FDC) ಹಾಗೂ ದ್ವಿತೀಯ ದರ್ಜೆ ಸಹಾಯಕರು (SDA/SDC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 30ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ನವೆಂಬರ್ 26 ಕೊನೆಯ ದಿನ ಎಂದು ತಿಳಿಸಲಾಗಿದೆ.
ಯಾವ ವರ್ಗದಲ್ಲಿ ಎಷ್ಟು ಹುದ್ದೆಗಳು?
ಉಳಿಕೆ ಮೂಲ ವೃಂದದ ಅಡಿಯಲ್ಲಿ 2,163 FDA/FDC ಹಾಗೂ 2,070 SDA/SDC ಹುದ್ದೆಗಳು ಸೇರಿವೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ 563 FDA/FDC ಹಾಗೂ 635 SDA/SDC ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಪರೀಕ್ಷೆ ಯಾವಾಗ?
ನೇಮಕಾತಿ ಪ್ರಕ್ರಿಯೆಯ ಭಾಗವಾಗಿ 2027ರ ಜನವರಿ 8, 9, 10, 16 ಮತ್ತು 17ರಂದು ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.








