ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ಲಕ್ಷ್ಮೇಶ್ವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಪಟ್ಟಣದ ಸರ್ಕಾರಿ ಪ್ರೌಢಶಾಲೆ ಸಮೀಪದ ನಿರ್ಲಕ್ಷ್ಯಕ್ಕೊಳಗಾಗಿದ್ದ ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸಿದರು.
ವರ್ಷಗಳಿಂದ ನಿರ್ವಹಣೆ ಇಲ್ಲದೆ ಸ್ಮಶಾನ ಭೂಮಿಯಲ್ಲಿ ಆಳೆತ್ತರದ ಜಾಲಿ, ಮುಳ್ಳಿನ ಗಿಡಗಳು ಹಾಗೂ ತ್ಯಾಜ್ಯ ತುಂಬಿಕೊಂಡಿದ್ದರಿಂದ ಅಂತ್ಯಸಂಸ್ಕಾರಕ್ಕೆ ಬರುವ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಹಲವು ಬಾರಿ ಪುರಸಭೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, “ಸಮಸ್ಯೆಯನ್ನು ಕೇವಲ ಸುದ್ದಿಯಾಗಿಸುವುದಲ್ಲ, ಪರಿಹಾರಕ್ಕೂ ಕೈಜೋಡಿಸೋಣ” ಎಂಬ ಉದ್ದೇಶದಿಂದ ಪತ್ರಕರ್ತರು ಜನರ ಸಹಕಾರದೊಂದಿಗೆ ಜೆಸಿಬಿ ಯಂತ್ರ ಬಳಸಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಗಿಡಗಂಟಿಗಳನ್ನು ತೆರವುಗೊಳಿಸಿ, ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸ್ಮಶಾನ ಭೂಮಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂಬಣ್ಣ ಬಾಳಿಕಾಯಿ, ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸುವ ಮೂಲಕ ಪತ್ರಕರ್ತರು ಮಾದರಿ ಸೇವೆ ಸಲ್ಲಿಸಿದ್ದಾರೆ ಎಂದರು.
ಚಂದ್ರು ಮಾಗಡಿ ಮಾತನಾಡಿ, ಶಾಲೆಯ ಪಕ್ಕದಲ್ಲಿದ್ದ ಸ್ಮಶಾನದಲ್ಲಿ ಗಿಡಗಂಟೆ ಹಾಗೂ ತ್ಯಾಜ್ಯ ತುಂಬಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಕಳೆದ ವರ್ಷ ಪತ್ರಿಕಾ ದಿನಾಚರಣೆ ಅಂಗವಾಗಿ 30ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ ಮಾಡಿಸಿದ್ದ ಪತ್ರಕರ್ತರು, ಈ ವರ್ಷ ಸಾರ್ವಜನಿಕ ಆಸ್ತಿಯ ಸಂರಕ್ಷಣೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ನಾಗಪ್ಪ ಮಂಜುನಾಥ ಮಾಗಡಿ, ನಾಗಪ್ಪ ಓಂಕಾರಿ, ಹೊನ್ನಪ್ಪ ವಡ್ಡರ, ವೆಂಕರಡ್ಡಿ ಪಾಟೀಲ, ಪುರಸಭೆಯ ಪರಶುರಾಮ ಪಶುಪತಿಹಾಳ, ಓಣಿಯ ನಾಗರಿಕರು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.
ಪತ್ರಕರ್ತರ ಈ ಸಮಾಜಮುಖಿ ಸೇವೆಯನ್ನು ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಹಿರಿಯ ನಾಗರಿಕರು ಮುಕ್ತಕಂಠದಿಂದ ಪ್ರಶಂಸಿಸಿದರು.



