ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು 142 ಕೋಟಿ ರೂ. ಮೌಲ್ಯದ ಲಾಭ ಪಡೆದಿದ್ದಾರೆ ಎಂದು ಇಡಿ ದೊಡ್ಡ ಆರೋಪ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಹೈಕೋರ್ಟ್ಗೆ ಇಡಿ ಚಾರ್ಜ್ಶೀಟ್ ಸಲ್ಲಿಸಿದ್ದು ಇಂದು ವಿಚಾರಣೆ ನಡೆಯಿತು.
ಇಡಿಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, 2023 ರ ನವೆಂಬರ್ನಲ್ಲಿ ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದ 751.9 ಕೋಟಿ ರೂ. ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುವವರೆಗೆ ಆರೋಪಿಗಳು ಅಪರಾಧದ ಆದಾಯದಿಂದ ಲಾಭ ಪಡೆಯುತ್ತಿದ್ದರು ಎಂದು ತಿಳಿಸಿದರು.
ಅಪರಾಧದ ಆದಾಯವನ್ನು ಪಡೆದಾಗ ಗಾಂಧಿ ಕುಟುಂಬ ಹಣ ವರ್ಗಾವಣೆ ಮಾಡಿದ್ದು ಮಾತ್ರವಲ್ಲದೆ, ಆದಾಯವನ್ನು ಹಿಡಿದಿಟ್ಟುಕೊಳ್ಳುವ ಮೂಲಕವೂ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ.
ವಿಚಾರಣೆ ವೇಳೆ ಪ್ರಕರಣದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರತಿಯನ್ನು ಸುಬ್ರಮಣಿಯನ್ ಸ್ವಾಮಿಗೆ ನೀಡಬೇಕೆಂದು ನ್ಯಾಯಾಧೀಶರು ಇಡಿಗೆ ತಿಳಿಸಿದರು. ಸುಬ್ರಮಣಿಯನ್ ಸ್ವಾಮಿ ಅವರು 2014 ರ ಜೂನ್ 26 ರಂದು ದೂರು ನೀಡಿದ್ದರು. ಇಡಿ 2021 ರಿಂದ ತನಿಖೆ ನಡೆಸಿ ಈ ವರ್ಷ ಆರೋಪ ಪಟ್ಟಿ ಸಲ್ಲಿಸಿತ್ತು.