ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2023-24ನೇ ಸಾಲಿನಲ್ಲಿ ಅಮೃತ್ ರೈಲು ನಿಲ್ದಾಣ ಯೋಜನೆಯಡಿ 1000ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಸಂತೋಷದ ವಿಷಯವಾಗಿದೆ. ದೇಶದ ನಿರಂತರ ಅಭಿವೃದ್ಧಿಯಲ್ಲಿ ಸುಗಮ ಮತ್ತು ಸಂಘಟಿತ ರೈಲು ಸಾರಿಗೆ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ಸಾಧನವಾಗಿರುವುದರ ಜೊತೆಗೆ, ದೇಶದ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಯ ಬೆನ್ನೆಲುಬಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹರ್ಷ ವ್ಯಕ್ತಪಡಿಸಿದರು.
ಅವರು ಗುರುವಾರ ಧಾರವಾಡದಲ್ಲಿ ಅಮೃತ್ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ಸರ್ಕಾರವು ರೈಲು ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಬದ್ಧವಾಗಿದೆ. ಪ್ರಧಾನಿ ಮೋದಿ ಅವರು ನಮ್ಮ ರೈಲ್ವೆ ನಿಲ್ದಾಣಗಳು, ರೈಲುಗಳು, ಹಳಿಗಳು ಮತ್ತು ಸಿಗ್ನಲಿಂಗ್ನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸಲು ಬಯಸುತ್ತಾರೆ. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಾ, ದೇಶಾದ್ಯಂತ ರೈಲ್ವೆ ಯೋಜನೆಗಳು ಬಹಳ ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ರಾಜ್ಯಪಾಲರು ಹೇಳಿದರು.
ಕರ್ನಾಟಕದಲ್ಲಿ ಪ್ರಸ್ತುತ 50,792 ಕೋಟಿ ರೂ.ಗಳ ಮೌಲ್ಯದ ಕಾಮಗಾರಿಗಳು ನಡೆಯುತ್ತಿವೆ. 2025-26 ಸಾಲಿನ ಬಜೆಟ್ನಲ್ಲಿ ರಾಜ್ಯಕ್ಕೆ 7,564 ಕೋಟಿ ರೂಪಾಯಿ ಹಂಚಿಕೆಯಾಗಿದ್ದು, 61 ನಿಲ್ದಾಣಗಳನ್ನು ವಿಶ್ವ ದರ್ಜೆಯ ರೈಲು ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ ಮಾತನಾಡಿದರು. ಮಾಜಿ ಶಾಸಕ ಅಮೃತ ದೇಸಾಯಿ, ರೈಲ್ವೆ ಐಜಿಪಿ ಆರ್.ಎಸ್.ಪಿ ಸಿಂಗ್ ವೇದಿಕೆಯಲ್ಲಿ ಇದ್ದರು.
ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಮುಕುಲ ಸರಣ ಮಾತುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈಲ್ವೆ ಅಧಿಕಾರಿ ಅಂಜಿನಿ ಹೆಚ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಇತರ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ರೈಲ್ವೆ ಬಳಕೆದಾರ ಸಂಘದ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು.
ಧಾರವಾಡ ರೈಲು ನಿಲ್ದಾಣ ಪುನರಾಭಿವೃದ್ಧಿ ಮತ್ತು ಆಧುನಿಕರಣ ಯೋಜನೆಯ ಅಂಗವಾಗಿ ಜಿಲ್ಲೆಯ ಶಾಲಾ ಮಕ್ಕಳಿಗೆ ನೈಋತ್ಯ ರೈಲ್ವೆ ಇಲಾಖೆಯಿಂದ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ರಾಜಭಾಷಾ ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.



