ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರಕಾರ ಆದೇಶ ನೀಡಿದ್ದು, ಬಹುತೇಕ ಬಡ ಮತ್ತು ಸಾಮಾನ್ಯ ವರ್ಗದವರಿಗೆ ಅನೂಕೂಲವಾಗಿದ್ದ ಜನೌಷಧಿ ಕೇಂದ್ರಗಳ ಮೇಲೆ ರಾಜ್ಯ ಸರಕಾರ ಕೆಂಗಣ್ಣು ಬೀರಿದೆ. ರಿಯಾಯತಿ ದರದಲ್ಲಿ ಅಗತ್ಯ ಔಷಧಿ ದೊರಕುತ್ತಿದ್ದ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರ ಸಾಮಾನ್ಯ ಜನರಿಗೆ ನೋವು ತರುವ ಸಂಗತಿಯಾಗಿದೆ.
ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಜನೌಷಧಿ ಕೇಂದ್ರಗಳನ್ನು ರಾಜ್ಯ ಸರಕಾರ ಸರಕಾರಿ ಆಸ್ಪತ್ರೆ ಆವರಣದಿಂದ ಬೇರಡೆ ಸ್ಥಳಾಂತರಿಸಲು ಹೊರಟಿರುವದು ಟೀಕೆಗೆ ಕಾರಣವಾಗಿದೆ. ಬಡವರಿಗೆ, ಸಾಮಾನ್ಯ ಜನರಿಗೆ ಔಷಧಿ ಖರೀದಿಯಲ್ಲಿ ಶೇ. 50-75ರಷ್ಟು ಉಳಿತಾಯವಾಗುತ್ತಿದ್ದ ಈ ಜನೌಷಧಿ ಕೇಂದ್ರಗಳು ಬಹಳಷ್ಟು ಜನರಿಗೆ ಅನೂಕೂಲವಾಗಿದ್ದವು. ಅಲ್ಲದೆ ಅನೇಕ ನಿರುದ್ಯೋಗಿ ವೈದ್ಯಕೀಯ ರಂಗದ ಪದವೀಧರರಿಗೆ ಇದು ಉದ್ಯೋಗ ನೀಡಿತ್ತು.
ನಿರಂತರವಾಗಿ ಬಿಪಿ, ಶುಗರ್, ಕ್ಯಾನ್ಸರ್, ಹೃದಯ ಖಾಯಿಲೆ ಹೀಗೆ ಅನೇಕ ರೋಗಗಳಿಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ದೊರೆಯುತ್ತಿದ್ದರಿಂದ ಬಹುತೇಕ ಜನರು ಇದರ ಮೇಲೆ ಅವಲಂಬಿತರಾಗಿದ್ದರು. ಸರಕಾರಿ ಆಸ್ಪತ್ರೆ ವೈದ್ಯರು ಬರೆದುಕೊಡುವ ಮಾತ್ರೆಗಳು ಅವರಣದಲ್ಲಿ ಇದ್ದ ಜನೌಷಧಿ ಕೇಂದ್ರದಲ್ಲಿ ರಿಯಾಯತಿ ದರದಲ್ಲಿ ದೊರಕುತ್ತಿದ್ದವು. ಆದರೆ ಇದೀಗ ಸರಕಾರ ಏಕಾಏಕಿ ಈ ಆದೇಶ ನೀಡಿರುವದು ಎಷ್ಟು ಸರಿ, ಇದು ಬಡವರ ಮೇಲೆ ರಾಜ್ಯ ಸರಕಾರ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರಿ ಆಸ್ಪತ್ರೆಗಳ ಆವಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವದರಿಂದ, ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಕಡಿಮೆ ಹಾಗೂ ಕೈಗೆಟುಕುವ ದರಕ್ಕೆ ಸಾಮಾನ್ಯ ಮತ್ತು ಬಡ ಜನರಿಗೆ ದೊರಕಿಸುತ್ತಿರುವ ಕೇಂದ್ರ ಸರಕಾರದ ಉದ್ದೇಶಕ್ಕೆ ರಾಜ್ಯ ಸರಕಾರ ಅಡ್ಡಿಪಡಿಸಿದಂತಾಗುತ್ತದೆ. ಕೂಡಲೇ ರಾಜ್ಯ ಸರಕಾರ ಹೊರಡಿದ ಈ ಆದೇಶವನ್ನು ರದ್ದುಗೊಳಿಸಬೇಕು. –
ಡಾ. ಚಂದ್ರು ಲಮಾಣಿ
ಶಾಸಕರು.