ವಿಜಯಸಾಕ್ಷಿ ಸುದ್ದಿ, ಗದಗ: ನರ್ಸಿಂಗ್ ಶಿಕ್ಷಣಕ್ಕೆ ಇಂದು ಹೆಚ್ಚಿನ ಬೇಡಿಕೆ ಇದೆ. ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ. ದೇಶದಲ್ಲಿಯೇ ತಮಿಳನಾಡು 73 ಮೆಡಿಕಲ್ ಕಾಲೇಜುಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ರಾಜ್ಯವು 71 ಕಾಲೇಜುಗಳೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಶುಕ್ರವಾರ ಗದುಗಿನ ಭರತ್ ಮೆಗಾ ಸಿಟಿಯಲ್ಲಿ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೆಡಿಕಲ್ ಸೀಟುಗಳನ್ನು ಗಣನೆಗೆ ತೆಗೆದುಕೊಂಡರೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಆರೋಗ್ಯ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ರಾಜ್ಯವು ಭದ್ರ ಬುನಾದಿ ಹಾಕಿದೆ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಈ ಶಿಕ್ಷಣಕ್ಕೆ ಪಾರದರ್ಶಕತೆ ತಂದರು. ಮೆರಿಟ್ ಮೇಲೆ ಸೀಟುಗಳನ್ನು ಪಡೆಯಲು ಸಿಇಟಿ, ನೀಟ್ ಪದ್ಧತಿಯನ್ನು ಜಾರಿಗೊಳಿಸಿ ದೇಶಕ್ಕೆ ಮಾದರಿ ಹಾಕಿಕೊಟ್ಟರು ಎಂದರು.
ಗದಗ ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಸಚಿವರು ತಿಳಿಸಿದರು.
ವಿ.ಪ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗದಗ ಪರಿಸರಕ್ಕೆ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ನೂತನ ಕಟ್ಟಡ ಮಾದರಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಶೃದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಜಗದೀಶ ಶೆಟ್ಟರ ಮಾತನಾಡಿ, ನರ್ಸಿಂಗ್ ಕೋರ್ಸ್ ವೃತ್ತಿಪರತೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವ ಸಂಕನೂರ ಕಾಲೇಜು ಮಾದರಿ ಕಾಲೇಜಾಗಲಿ ಎಂದು ಶುಭ ಕೋರಿದರು.
ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಇಚ್ಛಾಶಕ್ತಿ, ಧೈರ್ಯದೊಂದಿಗೆ ಡಾ. ಪ್ರಕಾಶ ಸಂಕನೂರ ಅವರು ಪ್ರಾರಂಭಿಸಿದ ಈ ಕಾಲೇಜು ಸುಸಜ್ಜಿತ ಕಟ್ಟಡದೊಂದಿಗೆ ಆರಂಭಗೊಂಡಿದೆ. ವೈದ್ಯರು ಎಷ್ಟು ಮುಖ್ಯವೋ ನರ್ಸ್ಗಳೂ ಅಷ್ಟೇ ಮುಖ್ಯ ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನರ್ಸಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಮುನ್ನಡೆಸುವದು ಕಷ್ಟದ ಕೆಲಸ. ಅಂತಹ ಕಾರ್ಯಕ್ಕೆ ಮುಂದಾಗಿರುವ ಸಂಕನೂರ ಕುಟುಂಬದ ಸಾಹಸ ಮೆಚ್ಚುವಂತದ್ದು. ಕಾಲೇಜು ಸುಸಜ್ಜಿತವಾಗಿದ್ದು, ಸರಕಾರದಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳು ಸಿಗುವಂತಾಗಲಿ ಎಂದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಎಸ್.ವ್ಹಿ. ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನ್ಸೆಂಟ್ ಪಾಟೀಲ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್, ಪ್ರೊ. ದತ್ತಪ್ರಸನ್ನ ಪಾಟೀಲ ನಿರೂಪಿಸಿ ವಂದಿಸಿದರು.
ವೇದಿಕೆಯ ಮೇಲೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಯುವ ಧುರೀಣ ಭರತ್ ಬೊಮ್ಮಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ ಸಾಬ ಬಬರ್ಚಿ, ಸಿನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ, ಕಳಸಾಪೂರ ಗ್ರಾ.ಪಂ ಅಧ್ಯಕ್ಷೆ ಅನಸೂಯಾ ಬೆಟಗೇರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ರಾಜು ಕುರಡಗಿ, ಡಾ. ಪ್ರಕಾಶ ಸಂಕನೂರ, ಡಾ. ಶ್ವೇತಾ ಸಂಕನೂರ, ಮೋಹನ ಸಿದ್ಧಾಂತಿ, ಮೀನಾಕ್ಷಿ ದೇವಾಂಗಮಠ, ಶರಣಮ್ಮ ಸಂಕನೂರ, ಸಂಕನೂರ ಸಹೋದರರು ಉಪಸ್ಥಿತರಿದ್ದರು.
ನರ್ಸಿಂಗ್ ಕೋರ್ಸ್ಗಳಿಗೆ ಇಂದು ಬಹು ಬೇಡಿಕೆ ಇದ್ದು, ನರ್ಸಿಂಗ್ ವಿದ್ಯಾರ್ಥಿಗಳು ವಿದೇಶಿ ಭಾಷೆಗಳ ಜ್ಞಾನವನ್ನು ಹೊಂದಿದ್ದರೆ ವಿದೇಶಗಳಲ್ಲಿಯೂ ಈ ಕೋರ್ಸ್ ಪೂರ್ಣಗೊಳಿಸಬಹುದು. ಅಂಥವರಿಗೆ ಹೆಚ್ಚಿನ ಆದ್ಯತೆ ಇದೆ. ಭಾರತೀಯ ವೈದ್ಯಕೀಯ ಶಿಕ್ಷಣ ಪಡೆದವರಿಗೆ ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣವನ್ನು ಶೃದ್ಧೆಯಿಂದ ಅಧ್ಯಯನ ಮಾಡಬೇಕು.
– ಡಾ. ಶರಣಪ್ರಕಾಶ ಪಾಟೀಲ.
ವೈದ್ಯಕೀಯ ಶಿಕ್ಷಣ ಸಚಿವರು.
“ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆಯುವ ಮೂಲಕ ಮಾದರಿ ಕಾಲೇಜ್ ಆಗಿ ಮುನ್ನಡೆದಿದ್ದು, ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ಮುಂಚೂಣಿಯಲ್ಲಿದೆ. ದೂರದೃಷ್ಟಿಯುಳ್ಳ ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಡಾ. ಪ್ರಕಾಶ ಸಂಕನೂರ ಗದಗ ಪರಿಸರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.