ರಾಮನಗರ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಚೇರಿಯಲ್ಲಿನ ಎಲ್ಲಾ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಹಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.
ನಿಯಮದ ಪ್ರಕಾರ 7 ದಿನಗಳಲ್ಲಿ ವಿತರಿಸಬೇಕಾಗಿದ್ದ ಲೈಸೆನ್ಸ್ ಮತ್ತು ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು ತಿಂಗಳುಗಳ ಕಾಲ ವಿಳಂಬವಾಗಿ ಕಚೇರಿಯಲ್ಲೇ ಸಂಗ್ರಹವಾಗಿದ್ದವು ಎಂಬುದು ದಾಳಿ ವೇಳೆ ಪತ್ತೆಯಾಗಿದೆ. ಸಾರ್ವಜನಿಕರು ನೇರವಾಗಿ ಬಂದರೆ ಕೆಲಸ ವಿಳಂಬವಾಗುತ್ತಿದ್ದು, ಏಜೆಂಟ್‌ಗಳ ಮೂಲಕ ಹಣ ನೀಡಿದರೆ ಮಾತ್ರ ಕೆಲಸ ಮಾಡಲಾಗುತ್ತಿತ್ತು ಎಂಬ ದೂರುಗಳಿಗೂ ತಾಳೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಕಚೇರಿಯಲ್ಲಿ ಏಜೆಂಟ್‌ಗಳ ನಡುವೆ ಕಮಿಷನ್ ವಿಚಾರಕ್ಕೆ ನಡೆದ ಗಲಾಟೆಯ ಕುರಿತು ಯಾವುದೇ ಪೊಲೀಸ್ ದೂರು ದಾಖಲಿಸದಿರುವ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಕಳೆದ ಒಂದು ವರ್ಷದಲ್ಲಿ ಇದೇ ಕಚೇರಿಯ ಮೇಲೆ ಮೂರು ಬಾರಿ ಲೋಕಾಯುಕ್ತ ದಾಳಿ ನಡೆದಿದ್ದರೂ ಭ್ರಷ್ಟಾಚಾರದಲ್ಲಿ ಬದಲಾವಣೆ ಕಂಡುಬಂದಿಲ್ಲ ಎಂದು ಆರೋಪಗಳು ಕೇಳಿಬಂದಿವೆ.
ದಾಳಿಯ ವೇಳೆ ಲೋಕಾಯುಕ್ತ ಎಸ್‌ಪಿ ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಆರ್‌ಟಿಒ ಅಧಿಕಾರಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.



